ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಶೈಕ್ಷಣಿಕ ಅವೈಜ್ಞಾನಿಕ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಮುಂದೂಡಿ ಸರ್ವಪಕ್ಷಗಳ ಸಭೆಯನ್ನು ನಡೆಸಿ, ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ ಆಗ್ರಹಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನು ನಡೆಸಿ, ಬಿಜೆಪಿ ಮತ್ತು ಕಾಂಗ್ರೆಸ್‍ನ ಕೆಲ ಸಚಿವರು - ಶಾಸಕರು ವೈಜ್ಞಾನಿಕ ಸಮೀಕ್ಷೆಗೆ ಆಗ್ರಹಿಸಿದ್ದರೂ, ಸಿದ್ದರಾಮಯ್ಯ ಅವರು ಮಾತ್ರ ಹಿಂದೂ ಸಮಾಜವನ್ನು - ಹಿಂದೂಗಳನ್ನು ಒಡೆಯಲಿಕ್ಕಾಗಿಯೇ ಅವೈಜ್ಞಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಇದೆಲ್ಲಾ ಕಾಂಗ್ರೆಸ್‍ನ ಸೋನಿಯಾ ಮತ್ತು ಇನ್ನಿತರರ ಓಲೈಕೆಗಾಗಿ ನಡೆಯುತ್ತಿರುವ ಷಡ್ಯಂತ್ರ. ಈ ಮೂಲಕ ಮತಾಂತರವನ್ನು ಪ್ರೋತ್ಸಾಹಿಸಿ
ಜಾತಿ ಜಾತಿಗಳ ಮಧ್ಯೆ ಕಲಹ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲಿಕ್ಕಾಗಿಯೇ ವಿವಾದಗಳನ್ನು ಸೃಷ್ಟಿಸಿ ಜನಸಾಮಾನ್ಯರ ಯೋಚನಾ ದಿಕ್ಕನ್ನು - ಜನರ ಗಮನವನ್ನು ಬೇರೆಡೆಗೆ ಸೆಳೆಯಲಿಕ್ಕಾಗಿಯೇ ಸಮೀಕ್ಷೆ - ಗಣತಿ ಹೀಗೇ ನಾನಾ ರೀತಿಯ ಜನವಿರೋಧಿ ವಿಚಾರಗಳನ್ನು ಸಿದ್ದರಾಮಯ್ಯ ಅವರು ಜಾರಿ ಮಾಡುತ್ತಿರುವುದು ವಿಪರ್ಯಾಸ ಎಂದರು.
ಪ್ರಸ್ತುತ ಉದ್ದೇಶಿಸಿರುವ ಸಮೀಕ್ಷೆಯನ್ನು ಮುಂದೂಡಿ, ಸರ್ವಪಕ್ಷಗಳ ಸಭೆಯನ್ನು ಏರ್ಪಡಿಸಿ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಲಿ. ವೈಯಕ್ತಿಕವಾಗಿ ತಾವು ಸಮೀಕ್ಷೆಯನ್ನು ಬಹಿಷ್ಕರಿಸುತ್ತಿದ್ದು, ಸಮೀಕ್ಷೆಯನ್ನು ಬಿಜೆಪಿಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಗ್ರಾಮ ಮಟ್ಟದಲ್ಲಿ ಸಮೀಕ್ಷೆಯ ಶೈಲಿಯನ್ನು ಪರಿಶೀಲಿಸಲಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು ಮೋಕ, ಎಸ್. ಗುರುಲಿಂಗನಗೌಡ, ಕೆ.ಎ. ರಾಮಲಿಂಗಪ್ಪ, ಕೆ.ಎಸ್. ದಿವಾಕರ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್