ಡಿ.7ರಂದು ವೃಕ್ಷೋತ್ಥಾನ ಹೆರಿಟೇಜ್ ರನ್- ಸ್ವಯಂ ಪ್ರೇರಿತವಾಗಿ ಭಾಗವಹಿಸಿ : ಸಚಿವ ಎಂ.ಬಿ.ಪಾಟೀಲ ಕರೆ
ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಹಸರೀಕರಣಕ್ಕಾಗಿ, ಸ್ವಚ್ಛತೆಗಾಗಿ 2025ನೇ ಸಾಲಿನ ಡಿಸೆಂಬರ್ 7 ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವೃಕ್ಷೋತ್ಥಾನ ಹೆರಿಟೇಜ್ ರನ್‍ನಲ್ಲಿ ಜಿಲ್ಲಾಡಳಿತ, ಸ್ವಯಂ ಸೇವಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತವ
ಸಭೆ


ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಹಸರೀಕರಣಕ್ಕಾಗಿ, ಸ್ವಚ್ಛತೆಗಾಗಿ 2025ನೇ ಸಾಲಿನ ಡಿಸೆಂಬರ್ 7 ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವೃಕ್ಷೋತ್ಥಾನ ಹೆರಿಟೇಜ್ ರನ್‍ನಲ್ಲಿ ಜಿಲ್ಲಾಡಳಿತ, ಸ್ವಯಂ ಸೇವಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸಕ್ರೀಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಎಂ.ಬಿ.ಪಾಟೀಲ ಕರೆ ನೀಡಿದರು.

ಶನಿವಾರ ಸಂಜೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ವೃಕ್ಷೋತ್ಥಾನ ಹೆರಿಟೇಜ್ ರನ್ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ 2016 ರಿಂದ ಕೋಟಿ ವೃಕ್ಷ ಅಭಿಯಾನ ಆರಂಭಿಸಲಾಗಿದ್ದು, ವೃಕ್ಷೋತ್ಥಾನ ಆರಂಭದಿಂದ ಇಲ್ಲಿಯವರೆಗೆ ಕೋಟಿ ವೃಕ್ಷ ಅಭಿಯಾನದಡಿ ಜಿಲ್ಲೆಯಲ್ಲಿ 1.50 ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಆ ಮೂಲಕ ಅತ್ಯಂತ ಕಡಿಮೆ ಇದ್ದ ಜಿಲ್ಲೆಯ ಅರಣ್ಯ ಪ್ರದೇಶವನ್ನು ರಾಜ್ಯದ ಅರಣ್ಯ ಪ್ರದೇಶ ಸರಾಸರಿ ಸಮತೋಲಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಳೆದ 2023ರಲ್ಲಿ ನಡೆದ ವೃಕ್ಷೋತ್ಥಾನ ಹೆರಿಟೇಜ್ ರನ್‍ನಲ್ಲಿ 8 ಸಾವಿರ ಓಟಗಾರರು , 2024ರಲ್ಲಿ 9400 ಓಟಗಾರರು ಭಾಗವಹಿಸಿದ್ದರು.

ಈ ಬಾರಿ ನಡೆಯುವ ವೃಕ್ಷೋತ್ಥಾನ ಹೆರಿಟೇಜ್ ರನ್‍ನಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ 15 ಸಾವಿರ ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸುವ ಮೂಲಕ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಯಶಸ್ವಿಯಾಗಿ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನದ ಯಶಗೋಥೆ ಅಂತರರಾಷ್ಟ್ರೀಯ ಮಟ್ಟದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಿಗೊಂಡಿದ್ದು, ಅಭಿಯಾನದ ಯಶಸ್ವಿ ಕೈಗನ್ನಡಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜಯಪುರ ಜಿಲ್ಲೆ ಗುರುತಿಸಿಕೊಂಡಿದ್ದು, ಜಿಲ್ಲಾಡಳಿತ ಸೇರಿದಂತೆ ಸಾರ್ವಜನಿಕರ ಸಹಭಾಗಿತತ್ವದಿಂದ ಈ ಶ್ರೇಯಸ್ಸು ಜಿಲ್ಲೆಗೆ ಲಭಿಸಿದೆ ಎಂದು ಅವರು ಹೇಳಿದರು.

ಹೆರಿಟೇಜ್ ರನ್‍ನಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಕ್ರೀಯಾಯಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ, ಶಾಲಾ ಕಾಲೇಜ್‍ಗಳಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ, ಉದ್ಯಾನವನಗಳಲ್ಲಿ ನಗರದ ವಾರ್ಡಿನ ಖಾಲಿ ಜಾಗಗಳಲ್ಲಿ ಸಾರ್ವಜನಿಕರು ಸಸಿ ನೆಡುವ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದು ಮೆರಗು ಹೆಚ್ಚಿಸಬೇಕು. ಈ ಬಾರಿಯ ವೃಕ್ಷೋತ್ಥಾನ್ ಹೆರಿಟೇಜ್ ರನ್ ಯಶಸ್ವಿಯಾಗಿ ಹಮ್ಮಿಕೊಂಡು ರಾಷ್ಟ್ರದ ಮಹಾನಗರಗಳು ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ವೃಕ್ಷೋತ್ಥಾನ ಹೆರಿಟೇಜ್ ರನ್ ಗುರುತಿಸುವಂತಾಗಬೇಕು ಎಂದು ಅವರು ಹೇಳಿದರು.

ನಿಸರ್ಗದ ಬಗ್ಗೆ ಅಪಾರ ಕಾಳಜಿ, ಪ್ರೀತಿ ಹೊಂದಿದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಗಳ ಆಶಯದಂತೆ ಹೆರಿಟೇಜ್ ರನ್ ಮೂಲಕ ಹಸರಿಕರಣ ಜಾಗೃತಿ ಮೂಡುತ್ತಿದೆ. ಮಮದಾಪುರದ 1600 ಎಕರೆ ಅರಣ್ಯ ಪ್ರದೇಶಕ್ಕೆ ಸಿದ್ದೇಶ್ವರ ಶ್ರೀಗಳ ಹೆಸರಿಟ್ಟು ಗೌರವ ಅರ್ಪಿಸಲಾಗಿದೆ ಎಂದು ಅವರು ಹೇಳಿದರು.

ಸ್ವಚ್ಛತೆಯ ಮೂಲಕ ಹೆರಿಟೇಜ್ ರನ್ ಜಾಗೃತಿ : ಡಿ.7ರಂದು ಹಮ್ಮಿಕೊಂಡ ವೃಕ್ಷೋತ್ಥಾನ ಹೆರಿಟೇಜ್ ಜಾಗೃತಿಗಾಗಿ ಇದೇ ಸೆಪ್ಟಂಬರ್ 25 ರಂದು ನಗರದ ಕೋಟೆಗೋಡೆ ಹಾಗೂ ಆಯ್ದ ಐದು ಐತಿಹಾಸಿಕ ಸ್ಮಾರಕ ಹಾಗೂ ದೇವಸ್ಥಾನಗಳನ್ನು ಸ್ವಚ್ಚಗೊಳಿಸುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವವನ್ನು ಹಮ್ಮಿಕೊಂಡು ಈ ಹೆರಿಟೇಜ್ ರನ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಸ್ವಚ್ಚತಾ ಅಭಿಯಾನದಲ್ಲಿ ನಾನೂ ಕೂಡ ಭಾಗವಹಿಸುತ್ತೇನೆ. ಇದರೊಂದಿಗೆ ಸ್ವಚ್ಛ ಸುಂದರ ಹಸಿರು ಅಭಿಯಾನ ಕೂಡ ಹಮ್ಮಿಕೊಂಡು ಎಲ್ಲ ವಾರ್ಡಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿ ತಿಂಗಳು ಗ್ರಾಮ ಪಂಚಾಯತ್‍ಗಳಲ್ಲಿ ನಡೆಯುವ ಸಭೆಗಳಲ್ಲಿ ಹಸರಿಕರಣ ಕುರಿತು ಮನವರಿಕೆ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು. ಹಸಿರು ಗ್ರಾಮ-ಸ್ವಚ್ಛ ಗ್ರಾಮ ಹಾಗೂ ಹಸಿರು ವಾರ್ಡ-ಸ್ವಚ್ಛ ವಾರ್ಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಂಘ-ಸಂಸ್ಥೆಗಳಿಗೂ ಸಹ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಎಲ್ಲರೂ ಕಾರ್ಯಕ್ರಮದಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಈ ವೃಕ್ಷೋತ್ಥಾನ ಹೆರಿಟೇಜ್ ರನ್ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಮಾತನಾಡಿ, ವೃಕ್ಷೋತ್ಥಾನ ಹೆರಿಟೇಜ್‍ರನ್ ನೋಂದಣಿ ಕಾರ್ಯ ಈಗಾಗಲೇ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಹೆರಿಟೇಜ್ ರನ್‍ಗಳ ಕುರಿತು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ಮ್ಯಾರಾಥಾನ್ ಗ್ರೂಪ್‍ಗಳಿಗೆ ಮಾಹಿತಿ ಒದಗಿಸುವ ಮೂಲಕ ಹೆಚ್ಚೆಚ್ಚು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದ ಓಟಗಾರರು ಭಾಗವಹಿಸುವಂತೆ ಪ್ರೇರೆಪಿಸಲಾಗುವುದು. ಪಿಯು ಡಿಗ್ರಿ, ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿ ಸಿಬ್ಬಂದಿ, ತಾಲೂಕಾ ಮಟ್ಟದ ಕಚೇರಿಗಳ ಅಧಿಕಾರಿ-ಸಿಬ್ಬಂದಿ, ಪೊಲೀಸ್, ಅರಣ್ಯ, ಎನ್‍ಎಸ್‍ಎಸ್, ಎನ್‍ಸಿಸಿ, ಮಾಜಿ ಸೈನಿಕರು ನೊಂದಣಿ ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸಲು ಪ್ರೇರೆಪಿಸಲಾಗುವುದು ಎಂದು ಹೇಳಿದರು.

ಹೆರಿಟೇಜ್ ರನ್ ಜಾಗೃತಿಗಾಗಿ ಸೆ.25 ರಂದು ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ತಮ್ಮ ಅನಿಸಿಕೆ ಹಾಗೂ ಸಲಹೆ ಸೂಚನೆಗಳನ್ನು ನೀಡಿದರು.

ಮಹಾನಗರ ಪಾಲಿಕೆ ಮಹಾಪೌರ ಮಡಿವಾಳಪ್ಪ ಕರಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್‍ಐ ಇಲಾಖೆ ಧಾರವಾಡ ವೃತ್ತದ ರಮೇಶ ಮೂಲಿಮನಿ, ಕರ್ನಲ್ ವಂಶಿ, ಮುರುಗೇಶ ಪಟ್ಟಣಶೆಟ್ಟಿ, ಮಹಾಂತೇಶ ಬಿರಾದಾರ ಸೇರಿದಂತೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande