ಕೊಪ್ಪಳ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಭಾಗ್ಯನಗರ ಪಟ್ಟಣ ಪಂಚಾಯತಿಯಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಸ ಚೆಲ್ಲಿದ ಸ್ಥಳಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಭಾಗ್ಯನಗರದ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ತುಕಾರಾಮಪ್ಪ ಚಂದ್ರಪ್ಪ ಗಡಾದ, ಉಪಾಧ್ಯಕ್ಷರಾದ ಹೊನ್ನೂರಸಾಬ ಬೈರಾಪುರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವರಾಮ ಆನಂದಪ್ಪ ಮ್ಯಾಗಳಮನಿ, ಮುಖ್ಯಾಧಿಕಾರಿ ಸುರೇಶ ಬಬಲಾದ ಹಾಗೂ ಇತರ ಸದಸ್ಯರ ಸಮ್ಮುಖದಲ್ಲಿ ಭಾಗ್ಯನಗರ ಪಟ್ಟಣದ ವಿವಿಧೆಡೆ ಸ್ವಚ್ಚತಾ ಹೀ ಸೇವಾ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯ ಪೌರಕಾರ್ಮಿಕರುಗಳು ಹಾಗೂ ಆರೋಗ್ಯ ನಿರೀಕ್ಷಕರುಗಳು ಸಮುದಾಯ ಸಂಚಾಲಕರು ಕಸ ಸ್ವಚ್ಚಗೊಳಿಸಿದ ಪ್ರದೇಶದಲ್ಲಿ ರಂಗೋಲಿಯನ್ನು ಹಾಕಿ ಸ್ವಚ್ಚತೆಯನ್ನು ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿ, ಕಸ ಚೆಲ್ಲದಂತೆ ಅರಿವು ಮೂಡಿಸುತ್ತಿದ್ದಾರೆ.
ದೇಶದ ಎಲ್ಲಾ ಪಟ್ಟಣಗಳನ್ನು ಕಸಮುಕ್ತ ಪಟ್ಟಣವನ್ನಾಗಿಸುವುದು ಸ್ವಚ್ಚತಾ ಹೀ ಸೇವಾ-2025ರ ಸ್ವಚ್ಚ ಭಾರತ ಮಿಷನ್ (ನ) ಯೋಜನೆಯ ಮುಖ್ಯ ಧ್ಯೇಯವೇವಾಗಿದ್ದು, ಈ ಹಿನ್ನೆಲೆಯಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸ್ವಚ್ಚತಾ ಹೀ ಸೇವಾ ಅಭಿಯಾನವನ್ನು ಅಕ್ಟೋಬರ್ 2ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಸ್ವಚ್ಚತೆ ಸಾಧಿಸುವ ಗುರಿಯನ್ನು ಈ ಅಭಿಯಾನದ ರೂಪದಲ್ಲಿ ನಡೆಸಿ ಕಸಮುಕ್ತ ಭಾರತ, ಕರ್ನಾಟಕ, ಕೊಪ್ಪಳ ಜಿಲ್ಲೆ ಮತ್ತು ಕಸಮುಕ್ತ ಪಟ್ಟಣದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಭಾಗ್ಯನಗರದ ಕಸ ಚೆಲ್ಲಿರುವ ಪ್ರದೇಶಗಳನ್ನು ಗುರುತಿಸಿ, ಸ್ವಚ್ಛತಾ ಕಾರ್ಯ ಕೈಗೊಂಡು ಆ ಸ್ಥಳಗಳಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಇದರ ಜೊತೆಗೆ ಎಲ್ಲೆಂದರಲ್ಲಿ ಕಸ ಚೆಲ್ಲದೆ ಪ.ಪಂ ಕಸ ವಿಲೇವಾರಿ ವಾಹನಗಳಲ್ಲಿ ಕಸವನ್ನು ಹಾಕುವಂತೆ ತಿಳಿ ಹೇಳಲಾಗುತ್ತಿದೆ ಎಂದು ಭಾಗ್ಯನಗರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ ಬಬಲಾದ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್