ಸ್ವಚ್ಛತೆ ಕಾಪಾಡಿ, ಹಾವು ಕಡಿತದಿಂದ ಪಾರಾಗಬಹುದು : ಶಿವಾನಂದ ವ್ಹಿ.ಪಿ
ಕೊಪ್ಪಳ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮನೆಯ ಸುತ್ತ ಹಾಗೂ ಹೊಲಗಳಲ್ಲಿ ಅನವಶ್ಯಕ ಕಸ ಬೆಳೆಯದಂತೆ, ಇಲಿ ಮತ್ತು ಹೆಗ್ಗಣಗಳಂತಹ ಹಾವಿನ ಆಹಾರವಾಗಬಲ್ಲ ಜೀವಿಗಳ ಓಡಾಟವಿಲ್ಲದಂತೆ ಎಚ್ಚರ ವಹಿಸುವುದರಿಂದ ಹಾವುಗಳ ಸಂಚಾರ ಹಾಗೂ ಕಡಿತದಿಂದ ಪಾರಾಗಬಹುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂ
ಸ್ವಚ್ಛತೆ ಕಾಪಾಡಿ, ಹಾವು ಕಡಿತದಿಂದ ಪಾರಾಗಬಹುದು : ಶಿವಾನಂದ ವ್ಹಿ.ಪಿ


ಕೊಪ್ಪಳ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮನೆಯ ಸುತ್ತ ಹಾಗೂ ಹೊಲಗಳಲ್ಲಿ ಅನವಶ್ಯಕ ಕಸ ಬೆಳೆಯದಂತೆ, ಇಲಿ ಮತ್ತು ಹೆಗ್ಗಣಗಳಂತಹ ಹಾವಿನ ಆಹಾರವಾಗಬಲ್ಲ ಜೀವಿಗಳ ಓಡಾಟವಿಲ್ಲದಂತೆ ಎಚ್ಚರ ವಹಿಸುವುದರಿಂದ ಹಾವುಗಳ ಸಂಚಾರ ಹಾಗೂ ಕಡಿತದಿಂದ ಪಾರಾಗಬಹುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಕೊಪ್ಪಳ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಮಂಚಾಯತ್ ಕಾರ್ಯಾಲಯ ಹಿರೇವಂಕಲಕು0ಟಾ ಇವರ ಸಂಯುಕ್ತಾಶ್ರಯದಲ್ಲಿ ಉಚ್ಚಲಕುಂಟಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟಿçಯ ಹಾವು ಕಡಿತ ಜಾಗೃತಿ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಸೆಪ್ಟೆಂಬರ್ 19 ರಂದು ಅಂತರಾಷ್ಟಿçಯ ಹಾವು ಕಡಿತ ಜಾಗೃತಿ ದಿನ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಹಾವು ಕಡಿತದಿಂದ ಉಂಟಾಗುವ ಮರಣವನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ.

ಭಾರತ ಹಳ್ಳಿಗಳ ದೇಶ ಶೇ.70 ಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ಅವಲಂಬಿತರಾಗಿದ್ದಾರೆ. ಭಾರತದಲ್ಲಿ ಪ್ರಮುಖ 4 ವಿಷಕಾರಿ ಹಾವುಗಳಾದ ನಾಗರಹಾವು, ಕಟ್ಟಾವು, ಕೊಳಕುಮಂಡಲ ಹಾವು ಹಾಗೂ ಗರಗಸ ಮಂಡಲ ಹಾವು ಕಡಿತದಿಂದ ಸಾವುಗಳಲ್ಲಿ ಶೇ.90 ರಷ್ಟು ಅಧಿಕ ಸಾವುಗಳು ಸಂಭವಿಸುತ್ತವೆ.

ಹಾಗಾಗಿ ಈ 4 ಹಾವುಗಳ ಬಗ್ಗೆ ಎಚ್ಚರಿಗೆ ವಹಿಸಬೇಕು. ಮನೆಯ ಸುತ್ತ ಹಾಗೂ ಹೊಲಗಳಲ್ಲಿ ಅನವಶ್ಯಕ ಕಸ ಬೆಳೆಯದಂತೆ, ಇಲಿ ಮತ್ತು ಹೆಗ್ಗಣಗಳಂತಹ ಹಾವಿನ ಆಹಾರವಾಗಬಲ್ಲ ಜೀವಿಗಳ ಓಡಾಟವಿಲ್ಲದಂತೆ ಎಚ್ಚರ ವಹಿಸುವುದರಿಂದ ಹಾವುಗಳ ಸಂಚಾರ ಹಾಗೂ ಕಡಿತದಿಂದ ಪಾರಾಗಬಹುದು ಎಂದು ಅವರು ಹೇಳಿದರು.

ನಾಗರಹಾವು ಬಿಟ್ಟು ಉಳಿದ 3 ವಿಷಕಾರಿ ಹಾವುಗಳು ರಾತ್ರಿವೇಳೆ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಹಾಗಾಗಿ ರಾತ್ರಿವೇಳೆ ಹೊರಗಡೆ ಹೋಗುವಾಗ ಟಾರ್ಚ್ ಬಳಸಬೇಕು. ಮನೆ ಅಂಗಳವನ್ನು ಇಲಿ ಹೆಗ್ಗಣಗಳಂತಹ ಹಾವುಗಳು ತಿನ್ನುವ ಜೀವಿಗಳಿಂದ ಮುಕ್ತವಾಗಿಡಬೇಕು.

ಮನೆಯಂಗಳ ಅಥವಾ ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ತಿರುಗಾಡುವ ಸ್ಥಳಗಳಲ್ಲಿ ಗಿಡಗಂಟಿಗಳನ್ನು ಕಡಿದು ಸ್ವಚ್ಚವಾಗಿಟ್ಟುಕೊಳ್ಳಬೇಕು. ಹಾವುಗಳಿರುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವಾಗ ಶೂಗಳನ್ನು ಬಳಸಬೇಕು. ರಾತ್ರಿ ಮನೆಯ ಹೊರಗೆ ಹಾಗೂ ಹೊಲಗದ್ದೆಗಳಲ್ಲಿ ಮಲಗಬೇಕಾದಾಗ ನೆಲದಲ್ಲಿ ಮಲಗದೆ ಎತ್ತರ ಪ್ರದೇಶದ ಮಂಚ ಬಳಸಬೇಕು. ನೆಲದಲ್ಲಿ ಮಲಗಲೇಬೇಕೆಂದರೆ ಕಡ್ಡಾಯವಾಗಿ ಸೊಳ್ಳೆಪರದೆ ಬಳಸಬೇಕು ಎಂದು ತಿಳಿಸಿದರು.

ರೈತರು ಹೊಲದಲ್ಲಿ ದನ-ಕರಗಳಿಗೆ ಮೇವು ಹಾಗೂ ಹಸಿಹುಲ್ಲು ಕೀಳುವಾಗ ಕುಡುಗೋಲು ಬಳಸಬೇಕು. ಒಂದು ವೇಳೆ ಹಾವು ಕಚ್ಚಿದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ 40 ನಿಮಿಷದೊಳಗಾಗಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಹಾವು ಕಡೆದ ವ್ಯಕ್ತಿಯನ್ನು ಗಾಬರಿ ಪಡಿಸದೆ, ಸಮಾಧಾನ ಪಡಿಸಬೇಕು. ಹಾವಿನಿಂದ ನಿಧಾನವಾಗಿ ದೂರ ಸರಿಯಬೇಕು.

ರಕ್ತಬಂಧಕಪಟ್ಟಿ ಕಟ್ಟಬಾರದು. ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ಗಾಯವನ್ನು ಕತ್ತರಿಸಬಾರದು ಹಾಗೂ ಏನನ್ನೂ ಹಚ್ಚಬಾರದು. ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸಬೇಕು. ನಾಟಿ ಔಷಧ ಅಥವಾ ಅಸುರಕ್ಷಿತ ಚಿಕಿತ್ಸಾ ಪದ್ದತ್ತಿಯನ್ನು ಅವಲಂಬಿಸಬೇಡಿ.

ಒಟ್ಟಾರೆಯಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸುತ್ತ-ಮುತ್ತಲಿನ ಪ್ರದೇಶ ಸ್ವಚ್ಛತೆಯಿಂದ ಇಟ್ಟುಕೊಂಡು ಇದರ ಬಗ್ಗೆ ಇತರರಿಗೂ ಮಾಹಿತಿ ನೀಡಿ, ಜಾಗೃತರಾಗಬೇಕೆಂದು ತಿಳಿಸಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಮನಿಷ್ ಇವರು ಆರ್.ಸಿ.ಹೆಚ್, ಕುಟುಂಬ ಕಲ್ಯಾಣ ಕಾರ್ಯಕ್ರಮ, ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ವಿವರವಾಗಿ ಮಾತನಾಡಿದರು. ಸಿ.ಹೆಚ್.ಓ ರೆಡ್ಡಿ ಇವರು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮಾತನಾಡಿದರು. ಐ.ಟಿ.ಸಿ.ಟಿ ಆಪ್ತಸಮಾಲೋಚಕರಾದ ಬಾಳಪ್ಪ ಹೆಚ್.ಐ.ವಿ, ಏಡ್ಸ್ ನಿಯಂತ್ರಣ ಕುರಿತು ತಿಳಿಸಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಶಾರದ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಯ ಸದಸ್ಯರಾದ ಹನುಮಂತಪ್ಪ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande