ಕೊಪ್ಪಳ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಾಲ್ಯವಿವಾಹ ಮಾಡುವುದರಿಂದ ಅಪ್ರಾಪ್ತರ ಆರೋಗ್ಯ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಆಸ್ಪತ್ರೆ ಹಾಗೂ ಶ್ರೀ ಎಸ್.ಎ. ನಿಂಗೋಜಿ ಶಿಕ್ಷಣ ಮಹಾವಿದ್ಯಾಲಯ ಯಲಬುರ್ಗಾ ಇವರ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಆರೋಗ್ಯ ಅರಿವು ಆದೋಲನದ ಕುರಿತ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಯಲು ಹಲವಾರು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಹಾಗೂ ಯುವಕರಿಗೆ ನಾನಾ ಐ.ಇ.ಸಿ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.
ಬಾಲ್ಯವಿವಾಹ ಎಂದರೆ ಯಾವುದೇ 18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಅಥವಾ 21 ವರ್ಷದೊಳಗಿನ ಗಂಡುಮಕ್ಕಳಿಗೆ ವಿವಾಹ ಮಾಡುವುದಾಗಿದೆ.
ಬಾಲ್ಯ ವಿವಾಹಕ್ಕೆ ಕಾರಣಗಳೆಂದರೆ ಬಡತನ, ಅನಕ್ಷರತೆ, ಮೂಢನಂಬಿಕೆ, ಬಾಲ್ಯವಿವಾಹದ ದುಷ್ಪರಿಣಾಮದ ಬಗ್ಗೆ ಅರಿವು ಇಲ್ಲದೇ ಇರುವುದು, ರಕ್ತ ಸಂಬ0ಧವನ್ನು ಉಳಿಸಿಕೊಳ್ಳುವುದು, ಕುಟುಂಬದ ಆಸ್ತಿಯನ್ನು ಉಳಿಸಿಕೊಳ್ಳುವುದು, ಪಾಲಕರು ಮದುವೆ ಮಾಡಿ ಜವಾಬ್ದಾರಿಯನ್ನು ಕಳೆದುಕೊಳ್ಳುವುದು, ಸಾಮೂಹಿಕ ವಿವಾಹದಲ್ಲಿ ಕಡಿಮೆ ಖರ್ಚು ಆಗುತ್ತದೆ ಎಂಬ ಭಾವನೆ, ವೃದ್ಧರು ಹಾಗೂ ಅನಾರೋಗ್ಯದ ಹಿರಿಯರ ಆಸೆ ಈಡೇರಿಸುವ ಉದ್ದೇಶದಿಂದ ಬಾಲ್ಯ ವಿವಾಹ ಮಾಡುತ್ತಾರೆ.
ಬಾಲ್ಯ ವಿವಾಹ ಮಾಡುವುದರಿಂದ ಮದುವೆಯಾದವರ ಆರೋಗ್ಯ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಬ್ಬರಿಗೂ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ವಿಕಲಾಂಗ ಮಕ್ಕಳ ಜನನ ಉಂಟಾಗುತ್ತದೆ. ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಹಾಗೂ ಬಲತ್ಕಾರಕ್ಕೆ ಒಳಗಾಗುತ್ತಾರೆ. ಲೈಂಗಿಕ ಖಾಯಿಲೆಗಳಿಂದ ಹೆಚ್.ಐ.ವಿ/ಏಡ್ಸ್ ರೋಗಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ ಹಾಗೂ ರಕ್ತಹೀನತೆ ಉಂಟಾಗುತ್ತದೆ ಮತ್ತು ಕಡಿಮೆ ತೂಕದ ಮಗುವಿನ ಜನನವಾಗುವ ಸಾಧ್ಯತೆ ಇರುತ್ತದೆ. ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಎಲ್ಲಾ ಗ್ರಾಮಗಳಲ್ಲಿ ಪ್ರಶಿಕ್ಷಣಾರ್ಥಿಗಳು ನಾಗರಿಕ ಪೌರತ್ವ ತರಬೇತಿ ಶಿಬಿರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಾಮಾಜಿಕ ಕಾರ್ಯಕರ್ತೆ ಸರಸ್ವತಿ ಅವರು ರಾಷ್ಟಿçÃಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ, ಕೋಟ್ಪಾ ಕಾಯ್ದೆ-2003 ಕುರಿತು ವಿವರವಾಗಿ ಮಾತನಾಡಿದರು.
ಆರ್.ಕೆ.ಎಸ್.ಕೆ ಕಾರ್ಯಕ್ರಮದ ಆಪ್ತಸಮಾಲೋಚಕರಾದ ಶರಣಪ್ಪ ಉಪ್ಪಾರ ಅವರು ಹದಿ-ಹರೆಯದವರ ಆರೋಗ್ಯ ರಕ್ಷಣೆ ಮತ್ತು ಸ್ನೇಹ ಕ್ಲಿನಿಕ್ ಹಾಗೂ ಮಳೆಗಾಲದಲ್ಲಿ ಉಂಟಾಗುವ ಸೋಂಕಿತ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ, ಮೆದುಳುಜ್ವರ, ಆನೆಕಾಲುರೋಗ ಹಾಗೂ ಅಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತೆ ವಹಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಕಾಶ ಡಿ.ಹೆಚ್., ಸಹ ಉಪನ್ಯಾಸಕರಾದ ವಿ.ವಿ ಪತ್ತಾರ, ನಾಗರಾಜ ತಳವಾರ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್