ಗದಗ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗ ನಗರದ ಜವಳಗಲ್ಲಿಯಲ್ಲಿನ ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮ ಯಂತ್ರ ಹಾಗೂ ಇಂದಿರಾವನವನ್ನು ವೀಕ್ಷಣೆ ಮಾಡಿದರು. ನಂತರ ಎಸ್‌ಪಿ ಕಚೇರಿಯಲ್ಲಿ ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮ ನಿಯಂತ್ರಣ ಕೇಂದ್ರವನ್ನು ಉದ್ಘಾಟಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜವಳಗಲ್ಲಿಯಲ್ಲಿನ ಪ್ರಭುವಿನೆಡೆಗೆ ಪ್ರಭುತ್ವದ ಕಾರ್ಯಕ್ರಮದ ಯಂತ್ರದ ಬಟನ್ ಒತ್ತುವ ಮೂಲಕ ಜಿಲ್ಲೆಯ ಜನಸಂಖ್ಯೆ ವಿವರಗಳನ್ನು ನೀಡುವಂತೆ ಕೋರಿದರು.
ನಂತರ ಇಂದಿರಾವನ ವೀಕ್ಷಣೆ ನಡೆಸಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ಕಚೇರಿಗೆ ತೆರಳುವಷ್ಟರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೋರಿದ ಜಿಲ್ಲೆಯ ಜನಸಂಖ್ಯೆ ವಿವರಗಳನ್ನು ಸಿದ್ಧಪಡಿಸಿ ವರದಿಯನ್ನು ಜಿಲ್ಲಾಡಳಿತದಿಂದ ನೀಡಲಾಯಿತು. ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಭುವಿನಡೆಗೆ ಪ್ರಭುತ್ವ ಕಾರ್ಯಕ್ರಮದ ಅನುಷ್ಟಾನ ಉತ್ತಮವಾಗಲಿ. ಜನಸಾಮಾನ್ಯರು ಸರ್ಕಾರಿ ಸೇವೆಗಳಿಗಾಗಿ ವಿನಾಕಾರಣ ಅಲೆದಾಟ ತಪ್ಪಿಸಿ ಶೀಘ್ರ ಸೌಲಭ್ಯ ಹಾಗೂ ಸಮಸ್ಯೆಗಳಿಗೆ ಪರಿಹಾರ ದೊರೆಯಲು ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮ ಪೂರಕವಾಗಲಿ ಎಂದು ಶುಭ ಕೋರಿದರು.
ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ್ ಅವರು ಜಿಲ್ಲಾ ಪೊಲೀಸ ಕಚೇರಿಯಲ್ಲಿ ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮ ಅನುಷ್ಟಾನ ಕುರಿತಂತೆ ವಿವರಿಸುತ್ತಾ ಮತದಾರ ಪ್ರಭುವಿನ ಮನೆ ಬಾಗಿಲಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕಾರ್ಯ ಇದಾಗಿದೆ. ಈ ಕಾರ್ಯಕ್ರಮವು ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ಹಾಗೂ ಸಾರ್ವಜನಿಕರಿಗೆ ತ್ವರಿತವಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜಾರಿ ಮಾಡಲಾಗಿರುತ್ತದೆ. ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಹಾಗೂ ಯಶಸ್ಸುಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರ ಮಹಾತ್ವಾಕಾಂಕ್ಷಿಯ ಕಾರ್ಯಕ್ರಮ ಪ್ರಭುವಿನೆಡೆಗೆ ಪ್ರಭುತ್ವವಾಗಿದೆ. ಈ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಅಗಸ್ಟ್ 15 ರಂದು ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು. ಈವರೆಗೆ ಒಟ್ಟು 14 ಅಹವಾಲುಗಳು ಸಾರ್ವಜನಿಕರಿಂದ ಸ್ವೀಕೃತವಾಗಿದ್ದು ಬಹುತೇಕ ಎಲ್ಲ ಅಹವಾಲುಗಳಿಗೂ ಪರಿಹಾರ ಕಂಡುಕೊಳ್ಳಲಾಗಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು ಮುಂದಿನ ಹಂತದಲ್ಲಿ ವಿಸ್ತರಣೆ ಮಾಡುವ ಕುರಿತು ಯೋಜಿಸಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.
ಪ್ರ.ಪ್ರ. ಕಾರ್ಯಕ್ರಮ ಕುರಿತಂತೆ ನಗರದಲ್ಲಿ ಒಟ್ಟು ಮೂರು ಕಡೆ ಯಂತ್ರಗಳನ್ನು ಇರಿಸಲಾಗಿದೆ. ಜಿಲ್ಲಾ ಕ್ರೀಡಾಂಗಣ, ಜವಳ ಗಲ್ಲಿ ಹಾಗೂ ಬೆಟಗೇರಿಯ ತೆಂಗಿನಕಾಯಿ ಬಜಾರಿನಲ್ಲಿ ಪ್ರ.ಪ್ರ. ಯಂತ್ರಗಳು ಪ್ರಸ್ತುತವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರು ದಿನದ 24 ಗಂಟೆಗಳಲ್ಲಿಯೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರಭುವಿನಡೆಗೆ ಪ್ರಭುತ್ವ ಕಾರ್ಯಕ್ರಮ ಆರಂಭಿಕವಾಗಿ 10 ಅಂಶಗಳನ್ನು ಒಳಗೊಂಡಂತೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಹಿರಿಯ ನಾಗರಿಕರ ಸಹಾಯ, ತುರ್ತು ವೈದ್ಯಕೀಯ ಸೇವೆ, ಅಕ್ರಮ ಮದ್ಯ ಮಾರಾಟ, ರಸ್ತೆ ಸುರಕ್ಷತೆ ಕ್ರಮ, ಕಾನೂನು ಬಾಹಿರ ಹಾಗೂ ಸಾಮಾಜಿಕ ವಿದ್ರೋಹ ಚಟುವಟಿಕೆ ವಿರುದ್ಧ ಕ್ರಮ, ಜಮೀನು ಹಕ್ಕು ಪತ್ರ , ಪಿಂಚಣಿ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತು ಪಂಚಾಯತಿಗಳ ಕೆಲ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯರು ಹಾಗೂ ಸರ್ಕಾರದ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ರೋಣ ಶಾಸಕ ಜಿ.ಎಸ್.ಪಾಟೀಲ, ಶಾಸಕ ಎನ್.ಎಚ್.ಕೋನರೆಡ್ಡಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಫೀರ ಖಾದ್ರಿ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಸೇರಿದಂತೆ ಇಲಾಖೆ ಅಧಿಕಾರಿಗಳು, ಹಿರಿಯರು, ಗಣ್ಯರು, ಸಾರ್ವಜನಿಕರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP