ಕೊಪ್ಪಳ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯು ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಒತ್ತು ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಆಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿ, ಶ್ರೀ ಹುಲಿಗೆಮ್ಮ ದೇವ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಾಗೂ ಕೊಪ್ಪಳ ಜಿಲ್ಲೆಯ ಇತರೆ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲು ಕರೆದಿರುವ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಂಜನಾದ್ರಿ ಬೆಟ್ಟವು ಆಂಜನೇಯನ ಜನ್ಮಸ್ಥಳವೆಂದು ಪ್ರಸಿದ್ಧವಾಗಿದ್ದು, ಈ ಬೆಟ್ಟ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ದೇಶದಾದ್ಯಂತ ಪ್ರಸಿದ್ಧವಾಗಿದೆ. ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒಳಗೊಂಡಂತೆ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರವು ಈಗಾಗಲೇ ಅನುದಾನ ಒದಗಿಸಿದ್ದು, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಪಡಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಲಭ್ಯವಿರುವ ಭೂಮಿಯಲ್ಲಿ ಟ್ರಿ ಪಾರ್ಕ್, ಶೌಚಗೃಹಗಳು, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪ್ರದಕ್ಷಣಾ ಪಥವನ್ನು ಅಚ್ಚುಕಟ್ಟಾಗಿ ಮಾಡಬೇಕು. ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಮತ್ತು ರಸ್ತೆಯುದ್ಧಕ್ಕೂ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಒದಗಿಸಬೇಕು. ಪ್ರತಿ ವರ್ಷ ನಡೆಯುವ ಹನುಮಮಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ಮಾಲಾಧಾರಿಗಳಿಗೆ ಪ್ರಸಾದಕ್ಕಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಾಗಿ ಅಂಜನಾದ್ರಿಯಲ್ಲಿ ಭೋಜನಾಲಯ ನಿರ್ಮಿಸುವುದು ಅತ್ಯವಶ್ಯಕವಾಗಿದೆ. ಭೋಜನಾಲಯ ನಿರ್ಮಾಣದ ಕುರಿತು ಪ್ರಸ್ತಾವನೆ ತಯಾರಿಸಿ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕೊಪ್ಪಳ ಜಿಲ್ಲೆಯು ಐತಿಹಾಸಿಕ, ಧಾರ್ಮಿಕ ಕ್ಷೇತ್ರ, ವನ್ಯ ಜೀವಿಗಳು, ಪ್ರಾಣಿಪಕ್ಷಿಗಳು, ಪ್ರವಾಸಿ ತಾಣಗಳು, ಸ್ಮಾರಕಗಳು, ದೇವಸ್ಥಾನಗಳು, ಜೀವವೈವಿದ್ಯ ಅಭಯಾರಣ್ಯ, ವಾಟರ್ ಫಾಲ್ಸ್ ಉದ್ಯಾನವನ ಮುಂತಾದ ಪ್ರವಾಸಿ ತಾಣಗಳಿಂದ ಕೂಡಿದ್ದು, ಪ್ರವಾಸೋದ್ಯಮದಲ್ಲಿ ಹಲವಾರು ಅವಕಾಶಗಳನ್ನು ಹೊಂದಿದೆ. ಆಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿ, ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಾಗೂ ಕೊಪ್ಪಳ ಜಿಲ್ಲೆಯ ಇತರೆ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿ. ಇದರ ಜೊತೆಗೆ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಗುರುತಿಸಬೇಕು ಹಾಗೂ ಅವುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬ0ಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಂಗಾವತಿ ಶಾಸಕರಾದ ಜಿ.ಜನಾರ್ದನ ರೆಡ್ಡಿ ಅವರು ಮಾತನಾಡಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಅಗತ್ಯವಿರುವ ಭೂಮಿಗಾಗಿ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಅರಣ್ಯ ಇಲಾಖೆಗೆ ಸಲ್ಲಿಸಬೇಕು. ಈ ಬಗ್ಗೆ ಸಂಸದರೊಂದಿಗೆ ಸೇರಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಜಮೀನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಹನುಮಮಾಲ ಪಾದಯಾತ್ರಿಗಳಿಗೆ ಅನುಕೂಲವಾಗುವಂತೆ ಸಂಗಾಪುರದಿಂದ ರಾಂಪುರದವರೆಗೆ ಇರುವ 12 ಕಿ.ಮೀ ರಸ್ತೆಯನ್ನು ಐದು ಮೀಟರ್ ಅಗಲೀಕರಣ ಮಾಡಬೇಕು. ರಾಂಪುರದಿಂದ ಲಕ್ಷ್ಮೀಪುರ ವರೆಗಿನ 1.5 ಕಿ.ಮೀ ರಸ್ತೆಯನ್ನು ಶಾಸಕರ ಅನುದಾನದಲ್ಲಿ ಮಾಡುತ್ತೇನೆ. ಕೆ.ಕೆ.ಆರ್.ಡಿ.ಬಿ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗಾಗಿ ನೀಡಬೇಕು ಎಂದರು.
ಸಭೆಯಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಗುಪ್ತಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್