ಸ್ಮಶಾನ ಭೂಮಿ ಒತ್ತುವರಿ ತೆರವು, ಸಂರಕ್ಷಣೆ : ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ
ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಒತ್ತುವರಿಯಾದ ಸ್ಮಶಾನ ಭೂಮಿಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಜವಾಬ್ದಾರಿಯಾಗಿದ್ದು, ಒತ್ತುರಿಯಾಗಿರುವ ಸ್ಮಶಾನ ಭೂಮಿ ತೆರವುಗೊಳಿಸಿ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗ
ಡಿಸಿ


ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಒತ್ತುವರಿಯಾದ ಸ್ಮಶಾನ ಭೂಮಿಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಜವಾಬ್ದಾರಿಯಾಗಿದ್ದು, ಒತ್ತುರಿಯಾಗಿರುವ ಸ್ಮಶಾನ ಭೂಮಿ ತೆರವುಗೊಳಿಸಿ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ದೌರ್ಜನ್ಯ ನಿಯಂತ್ರಣ ಪ್ರತಿಬಂಧ ಕಾಯ್ದೆಯಡಿ ರಚಿತವಾದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಒತ್ತುವರಿಯಾಗಿರುವ ಸ್ಮಶಾನ ಭೂಮಿಗಳನ್ನು ತೆರವುಗೊಳಿಸುವುದು ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿಯಾಗಿದೆ ಹಾಗೂ ಸಂರಕ್ಷಣೆ ಮಾಡುವುದು ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದ್ದು, ಇದನ್ನರಿತು ಅಧಿಕಾರಿಗಳು ತೆರವುಗೊಳಿಸಿ, ತೆರವುಗೊಳಿಸಿದ ನಂತರ ಸುತ್ತಲೂ ಕಂಪೌಂಡ್‍ವನ್ನು ನಿರ್ಮಿಸುವ ಮೂಲಕ ಸ್ಮಶಾನ ಭೂಮಿ ಸಂರಕ್ಷಣೆಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಒತ್ತುವರಿಯಾದ ಸ್ಮಶಾನಗಳನ್ನು ತೆರವುಗೊಳಿಸದೇ ಇದ್ದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಗ್ರಾಮ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನಿನ ಪ್ರಕಾರ ತೆರಿಗೆ ಸಂಗ್ರಹದಲ್ಲಿ ಶೇ.25 ರಷ್ಟು ಎಸ್‍ಸಿಪಿ-ಟಿಎಸ್‍ಪಿ ಅನುದಾನವನ್ನು ಮೀಸಲಿಟ್ಟು, ವಾರ್ಷಿಕ ಕ್ರೀಯಾಯೋಜನೆ ಮಾಡಿಕೊಂಡು ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ಈ ಅನುದಾನ ಸದ್ಭಳಕೆ ಮಾಡಬೇಕು. ಕಾನೂನಿನ್ವಯ ಶೇ.25ರಷ್ಟು ಅನುದಾನ ಮೀಸಲಿಡುವುದು ಕಡ್ಡಾಯವಾಗಿದ್ದು, ಈ ಅನುದಾನ ಬೇರೆ ಉದ್ದೇಶಕ್ಕೆ ಬಳಕೆಯಾಗದಂತೆ ನಿಗಾ ವಹಿಸುವಂತೆ ಅವರು ಸೂಚನೆ ನೀಡಿದರು.

ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಖರೀದಿಯಾದ ಜಮೀನುಗಳಿಗೆ ಆರ್‍ಟಿಸಿ ಹಾಗೂ ಪಹಣಿ ಬದಲಾವಣೆ ಕುರಿತಂತೆ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಕ್ರೂಢೀಕರಿಸಿಕೊಂಡು ಅರ್ಹ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಬೇಕು. ಭೂ ಮಂಜೂರಾತಿ ಆದೇಶ, ಖರೀದಿ ಪತ್ರ ಹಾಗೂ ನಡಾವಳಿ ಸಹಿತ ಸಂಬಂಧಿಸಿದ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿಯಮಗಳನ್ನು ಪರಿಶೀಲಿಸಿಕೊಂಡು ನಿರ್ವಹಣೆ ಮಾಡಬೇಕು. ಫಲಾನುಭವಿಗಳು ಮರಣ ಹೊಂದಿದ್ದಲ್ಲಿ ದಾಖಲೆಗಳನ್ನು ಪರಿಶೀಲಿಸಿ ನಿಯಮಾನುಸಾರ ಪ್ರಥಮಾದ್ಯತೆ ಮೇಲೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಸಂಘ-ಸಂಸ್ಥೆಗಳಿಗೆ ಸಹಾಯಧನ ಬಿಡುಗಡೆ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಪರಿಶಿಲಿಸಿ ಭೌತಿಕ ಪರಿಶೀಲನೆ ನಂತರ ಆರ್ಥಿಕ ಪ್ರಾಯೋಜನೆಯನ್ನು ನೋಡಿಕೊಂಡು ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿಕೊಂಡು ಖಚಿತಪಡಿಸಿದ ನಂತರ ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು. ಸಹಕಾರಿ ಇಲಾಖೆಯಿಂದ ಎಸ್ಸಿ-ಎಸ್ಡಿ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್‍ಗಳನ್ನು ವಿತರಿಸಲಾಗಿದ್ದು, ಯಾವುದೇ ಕಾರ್ಡ ವಿತರಿಸುವುದು ಬಾಕಿ ಇರುವುದಿಲ್ಲ ಎಂದು ಸಭೆಗೆ ತಿಳಿಸಲಾಯಿತು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅನೇಕ ಸಮಸ್ಯೆಗಳ ಕುರಿತು ಸಮಿತಿ ಸದಸ್ಯರು ಸಭೆಯ ಅವಗಾಹನೆಗೆ ತಂದಿದ್ದು, ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಜನವರಿ-2025ರಿಂದ ಆಗಸ್ಟ್-2025ರವರೆಗೆ ದೌರ್ಜನ್ಯ ಅಧಿನಿಯಮ 1989ರನ್ವಯ ದಾಖಲಾದ ಪ್ರಕರಣಗಳ ಮಾಹಿತಿ ಸಭೆಗೆ ನೀಡಲಾಯಿತು. 74 ದಾಖಲಾದ ಪ್ರಕರಣಗಳು, ಸುಳ್ಳು ವರದಿ ಪ್ರಕರಣಗಳು 07, ಚಾರ್ಜ್‍ಶೀಟ್ ಸಲ್ಲಿಕೆಯಾದ 57 ಪ್ರಕರಣಗಳು, 8 ತನಿಖೆಯಲ್ಲಿರುವ ಪ್ರಕರಣಗಳು 2 ಕೈಬಿಟ್ಟ ಪ್ರಕರಣಗಳು ಎಂದು ಮಾಹಿತಿ ನೀಡಲಾಯಿತು. ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಧನ ಮಂಜೂರು ಮಾಡುವ 6 ಪ್ರಕರಣಗಳು ಬಾಕಿ ಇವೆ. ಕೂಲಂಕೂಷವಾಗಿ ಪರಿಶೀಲನೆ ಬಾಕಿ ಪ್ರಕರಣಗಳನ್ನು ಆದ್ಯತಾನುಸಾರ ಇತ್ಯರ್ಥಪಡಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.

ಸಭೆಯಲ್ಲಿ ಹೊರಗುತ್ತಿಗೆ ಆಧಾರದ ನೌಕರರಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿ, ಆಸ್ತಿ ಪರಭಾರೆ, ಶಿಥಿಲಾವ್ಯವಸ್ಥೆಯಲ್ಲಿರುವ ನೀರಿನ ಟ್ಯಾಂಕ್ ತೆರವುಗೊಳಿಸುವುದು, ಅಸ್ಪಶೃತೆ ನಿವಾರಣೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸದಸ್ಯರು ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತ್ರದ, ಡಿವೈಎಸ್‍ಪಿ ಬಸವರಾಜ ಯಲಿಗಾರ, ಬಾಗೇವಾಡಿ ಡಿವೈಎಸ್‍ಪಿ ಬಲ್ಲಪ್ಪ ನಂದಗಾಂವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ್ ಸೌದಾಗರ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಮುರುಗೇಶ ರೋಡಗಿ, ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅಭಿಷೇಕ ಚಕ್ರವರ್ತಿ, ಸಿದ್ದು ರಾಯಣ್ಣವರ, ಯಮನಪ್ಪ ಸಿದರಡ್ಡಿ, ಮದನಕುಮಾರ ಆರ್.ನಾಗರದಿನ್ನಿ, ನಾನು ಸೋಮಲು ಲಮಾಣಿ, ಬಂದಗಿ ಸಿದ್ದಪ್ಪ ಗಸ್ತಿ, ಮಹಾಂತೇಶ ಧರ್ಮಣ್ಣ ಸಾಸಬಾಳ, ರವಿಕಾಂತ ಬಿರಾದಾರ, ಮಲ್ಲು ತಳವಾರ, ರಾಜಶೇಖರ ಚೌರ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande