ಗದಗ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ಜಾತಿ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಹೆಸರು ಸೇರಿರುವ ಗೊಂದಲದ ಬಗ್ಗೆ ಎಲ್ಲರ ಅಭಿಪ್ರಾಯ ಕೇಳಲಾಗಿದ್ದು, ಹಿಂದುಳಿದ ವರ್ಗಗಳ ಆಯೋಗ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಅಗತ್ಯವಿರುವುದನ್ನು ಉಳಿಸಿ, ಅನಗತ್ಯವನ್ನು ತೆಗೆದು ಹಾಕಲಾಗುತ್ತದೆ ಎಂದು ಭರವಸೆ ನೀಡಿದರು.
ಸಮೀಕ್ಷೆ ಬರೀ ಜಾತಿಗೇ ಸೀಮಿತವಲ್ಲದೆ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಂಶಗಳನ್ನೂ ಒಳಗೊಂಡಿದೆ. ರಾಜ್ಯಾದ್ಯಂತ 1,45,000 ಶಿಕ್ಷಕರನ್ನು ನೇಮಿಸಿ, 15 ದಿನಗಳ ಕಾಲ ಮನೆ ಮನೆಗೂ ತೆರಳಿ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದರು. ಅವಕಾಶದಿಂದ ವಂಚಿತರಾದವರಿಗೆ ಪ್ರಾಥಮ್ಯ ನೀಡುವುದು ಸಮೀಕ್ಷೆಯ ಉದ್ದೇಶ ಎಂದೂ ಸ್ಪಷ್ಟಪಡಿಸಿದರು.
ರಾಜ್ಯಪಾಲರ ಪತ್ರ ಬಗ್ಗೆಯೂ ಸ್ಪಷ್ಟನೆ ನೀಡಿ, ಅದು ಬಿಜೆಪಿಯವರು ಕಳುಹಿಸಿದ ರಾಜಕೀಯ ಉದ್ದೇಶಿತ ಪತ್ರ ಎಂದು ವ್ಯಾಖ್ಯಾನಿಸಿದರು. ಜಾತಿ ಒಡೆಯುವ ಪ್ರಶ್ನೆಯೇ ಇಲ್ಲ, ರಾಹುಲ್ ಗಾಂಧಿ ಸತ್ಯ ಹೇಳಿದ್ದಾರೆ ಎಂದ ಸಿಎಂ, ಆಳಂದ ಮತಗಳ್ಳತನ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಶಿಫಾರಸ್ಸು ಬಿಜೆಪಿಯವರೇ ಕೇಂದ್ರಕ್ಕೆ ಕಳುಹಿಸಿದ್ದರು ಎಂದು ನೆನಪಿಸಿದ ಅವರು, ಅದರ ಬಗ್ಗೆ ಈಗ ಪ್ರಶ್ನೆ ಮಾಡುವವರೇ ಉತ್ತರಿಸಬೇಕು ಎಂದರು.
ಮಳೆ ಹಾನಿ ಕುರಿತಂತೆ ಶೀಘ್ರದಲ್ಲೇ ಸರ್ವೆ ನಡೆಸಿ ಪರಿಹಾರ ಒದಗಿಸಲಾಗುತ್ತದೆ ಎಂದರು. ರಸ್ತೆಗಳ ಗುಂಡಿ ವಿಚಾರದಲ್ಲಿ, ಈ ಬಾರಿ ಮಳೆ ಹೆಚ್ಚು ಆಗಿದ್ದು, ರಸ್ತೆಗಳು ಹಾಳಾಗಿವೆ. ಆದರೆ ಬಿಜೆಪಿ ನಾಲ್ಕು ವರ್ಷ ಆಡಳಿತ ನಡೆಸಿದರೂ ಗುಂಡಿ ಮುಚ್ಚಿಲ್ಲ ಎಂದು ತೀವ್ರ ಟೀಕೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / lalita MP