ಹುಬ್ಬಳ್ಳಿ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ದೇಶ ಪೊಲೀಯೋ ಮುಕ್ತ ರಾಷ್ಟ್ರವಾದಂತೆ 2026 ರ ಮಾರ್ಚ ತಿಂಗಳೊಳಗೆ ಕ್ಷಯ ಮುಕ್ತ ರಾಷ್ಟ್ರವಾಗಬೇಕು. ಧಾರವಾಡ ಜಿಲ್ಲೆಯನ್ನು ದೇಶದಲ್ಲೇ ಮೊದಲ ಕ್ಷಯ ಮುಕ್ತ ಜಿಲ್ಲೆಯಾಗಿಸಲು ಪ್ರತಿಯೊಬ್ಬರೂ ಪಣತೊಡೋಣ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ ಜೋಶಿ ಹೇಳಿದರು.
ಇಂದು ಕಲಘಟಗಿ ತಾಲೂಕು ಆಸ್ಪತ್ರೆ ಆವರಣದಲ್ಲಿ ಆರೋಗ್ಯವಂತ ಮಹಿಳೆ, ಸಶಕ್ತ ಪರಿವಾರ ಅಭಿಯಾನದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿಯ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನವನ್ನು ಆಚರಣೆ ಮಾಡಲಾಗುತ್ತದೆ. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ 15 ದಿನಗಳ ಕಾಲ ಸೇವಾ ಪಾಕ‌್ಷಿಕ ಎಂದು ಆಚರಿಸಲಾಗುವುದು. 15 ದಿನಗಳ ಕಾಲ ತಾವು ವಾಸಿಸುವ ಬಡಾವಣೆ, ಶಾಲೆ, ಕಾಲೇಜು, ಉದ್ಯಾನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಸಂದರ್ಭದಲ್ಲಿ ಜನರಿಗೆ ಉತ್ತಮ ಸೇವೆ ಸಲ್ಲಿಸಲಾಗುತ್ತದೆ. ಒಬ್ಬ ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುವುದು. ಸ್ವಾಸ್ಥ್ಯ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಕ್ತದೊತ್ತಡ, ಡಯಾಬಿಟಿಸ್, ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್, ರಕ್ತಹೀನತೆ ಸೇರಿದಂತೆ ಹಲವಾರು ರೋಗಗಳ ತಪಾಸಣೆ ಮಾಡಲಾಗುತ್ತದೆ. ತಪಾಸಣೆ ಶಿಬಿರದಲ್ಲಿ ವಿತರಿಸುವ ಔಷಧಿಗಳನ್ನು ಸತತವಾಗಿ ತೆಗೆದುಕೊಳ್ಳಬೇಕು. ಇದರಿಂದ ರೋಗಗಳನ್ನು ಕಡಿಮೆ ಸಮಯದಲ್ಲಿ ಗುಣಪಡಿಸಬಹುದು ಎಂದು ಅವರು ತಿಳಿಸಿದರು.
ಸ್ವಚ್ಛ ಭಾರತ ಅಭಿಯಾನದ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲೆ, ಅಡಿಕೆ, ಗುಟಕಾ ತಿಂದು ಎಲ್ಲೆಂದರಲ್ಲಿ ಉಗುಳಬಾರದು. ಚಟಗಳನ್ನು ಮಾಡುವವರು ಶಕ್ತಿವಂತರಾಗಿರುವುದಿಲ್ಲ. ಎಲ್ಲರೂ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು. ನಶಾ ಮುಕ್ತ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುವುದು. ಸಿಎಸ್‌ಆರ್ ಅನುದಾನದಲ್ಲಿ ಶಾಲಾ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ 35 ಸಾವಿರ ಡೆಸ್ಕ ವಿತರಣೆ ಹಾಗೂ ಸುಮಾರು 800 ಶಾಲೆಗಳಿಗೆ ಬಣ್ಣವನ್ನು ಹಚ್ಚಲಾಗಿದೆ ಎಂದರು.
2047ಕ್ಕೆ ಭಾರತ ದೇಶ ವಿಕಸಿತ ಭಾರತ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಈ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಎಲ್ಲರೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗುತ್ತದೆ. ಈಗಾಗಲೇ ಸುಮಾರು 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ಹಲವಾರು ಸಮೀಕ್ಷೆಗಳು ತಿಳಿಸಿವೆ. ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು. ಎಲ್ಲರೂ ಆರೋಗ್ಯವಂತರಾಗಬೇಕು ಎಂದು ಅವರು ಆಶಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa