ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಜೆಡಿಎಸ್ ಮೈತ್ರಿಕೂಟದಿಂದ ಪ್ರಬಲ ಸ್ಪರ್ಧೆ
ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಜೆಡಿಎಸ್ ಮೈತ್ರಿಕೂಟದಿಂದ ಪ್ರಬಲ ಸ್ಪರ್ಧೆ
ಚಿತ್ರ - ಕೋಲಾರ ತಾಲ್ಲೂಕಿನ ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿಯ ಸ್ವಾಗತ ಕಮಾನು.


ಕೋಲಾರ, ೦೫ ಆಗಸ್ಟ್ (ಹಿ.ಸ.) :

ಆ್ಯಂಕರ್ : ತಾಲ್ಲೂಕಿನ ವೇಮಗಲ್-ಕುರುಗಲ್ ಪಟ್ಟಣ ಪಂಚಾಯ್ತಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಅಖಾಡಕ್ಕೆ ಇಳಿದಿದೆ. ಮೇಲ್ನೋಟಕ್ಕೆ ಸ್ಥಳೀಯ ಪಟ್ಟಣ ಪಂಚಾಯ್ತಿ ಚುನಾವಣೆ ಆದರೂ ಸಹ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಕಳೆದ ಒಂದು ತಿಂಗಳ ಹಿಂದಿನಿಂದಲ್ಲೇ ಚುನಾವಣೆ ನಡೆಯುವ ವೇಮಗಲ್-ಕುರುಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪ್ರದೇಶದಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಅಖಾಡಕ್ಕೆ ಇಳಿದಿತ್ತು. ಶಾಸಕ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸೇರಿದಂತೆ ಚುನಾವಣೆ ಘೋಷಣೆಗೂ ಮೊದಲೇ ಪ್ರಚಾರ ಆರಂಭಿಸಿದ್ದರು.

ಶಾಸಕ ಕೊತ್ತೂರು ಮಂಜುನಾಥ್ ವಿಭಿನ್ನವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯಲ್ಲಿದ್ದ ಕೆಲವು ಕಾರ್ಯಕರ್ತರನ್ನು ಕರೆತಂದು ಅವರ ಹೆಗಲ ಮೇಲೆ ಕಾಂಗ್ರೆಸ್ ಶಾಲು ಹೊದಿಸಿ ಅವರನ್ನು ತಬ್ಬಿಕೊಂಡು ಮುತ್ತಿಟ್ಟು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕೊತ್ತೂರು ಮಂಜುನಾಥ್ ಈ ವಿಲಕ್ಷಣ ನಡೆಗೆ ಸಭೆಯಲ್ಲಿ ಕುಳಿತಿದ್ದ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಮತ್ತು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಲೆ ಚೆಚ್ಚಿಕೊಂಡವರಂತೆ ಆಕಾಶದ ಕಡೆ ನೋಡುತ್ತಿದ್ದರು.

ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿ ಚುನಾವಣೆ ಮುಂದೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಿಗೆ ದಿಕ್ಸೂಚಿ ಆಗಲಿದೆ. ಕಳೆದ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಬೆಂಬಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಟಿಕೆಟ್ ಪಡೆದವರೆಲ್ಲಾ ಆಯ್ಕೆಯಾದರು. ಆದರೆ ವರ್ತೂರ್ ಪ್ರಕಾಶ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬರುವ ಎಲ್ಲಾ ಪ್ರಯತ್ನಗಳನ್ನು ಶ್ರೀನಿವಾಸಪುರದ ಮೇದಾವಿ ರಾಜಕಾರಣಿ ರಮೇಶ್ ಕುಮಾರ್ ಹಾಗೂ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ತಡೆದರು.

ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದ ಸಿ.ಎಸ್.ವೆಂಕಟೇಶ್ ಸೇರಿದಂತೆ ಇತರರು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದರು. ಅಂದಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ನೀವು ಕಾಂಗ್ರೆಸ್ ಟಿಕೆಟ್ ನಿಂದ ಆಯ್ಕೆಯಾಗಿದ್ದೀರಿ ಪಕ್ಷದಲ್ಲಿರಿ ಇಲ್ಲ ನಿಮ್ಮನ್ನು ಉಚ್ಛಾಟನೆ ಮಾಡುವುದಾಗಿ ಹೇಳಿ ಕಡೆಗೆ ಲೋಕಸಭಾ ಚುನಾವಣೆ ಅವರೇ ಬಿಜೆಪಿಗೆ ವಲಸೆ ಹೋಗಿದ್ದು ಹಳೇ ರಾಜಕೀಯ ಚರಿತ್ರೆ ಆಗಿದೆ. ಕೆ.ಹೆಚ್.ಮುನಿಯಪ್ಪ ದೂರ ದೃಷ್ಠಿಯಿಂದ ಸಿ.ಎಸ್.ವೆಂಕಟೇಶ್ ಸೇರಿದಂತೆ ವರ್ತೂರ್ ಪ್ರಕಾಶ್ ಬೆಂಬಲಿಗರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಮುನಿಯಪ್ಪನವರು ಲೋಕಸಭಾ ಚುನಾವಣೆಯಲ್ಲಿ ಸೋತು ದೇವನಹಳ್ಳಿಗೆ ವಲಸೆ ಹೋದರು.

ಈಗ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅನಿಲ್ ಕುಮಾರ್ ಪಾರಪತ್ಯ ಜೋರಾಗಿದೆ. ಶಾಸಕ ಕೊತ್ತೂರು ಮಂಜುನಾಥ್ ಅನಿಲ್ ಕುಮಾರ್ ಹಾಕಿದ ಗೆರೆಯನ್ನು ದಾಟುವುದಿಲ್ಲ. ಇಬ್ಬರೂ ಸೇರಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯ್ತಿ ಆಡಳಿತ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಜೇಬಿನಿಂದ ಬೆವರು ಸುರಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರು. ವೇಮಗಲ್-ಕುರುಗಲ್ ಪಟ್ಟಣ ಪಂಚಾಯ್ತಿಯಲ್ಲಿ ಸಹ ಮೈತ್ರಿ ಮಾಡಿಕೊಂಡಿದೆ. ಎರಡು ಭಾರಿ ಶಾಸಕರಾಗಿದ್ದ ವರ್ತೂರ್ ಪ್ರಕಾಶ್ ಗೆ ವೇಮಗಲ್ ಸುತ್ತಮುತ್ತಲಿನ ಹಳ್ಳಿಗಳ ಇಂಚಿಂಚಿ ರಾಜಕಾರಣ ಮತ್ತು ಅಲ್ಲಿನ ಎರಡನೇ ಸ್ಥರದ ನಾಯಕರ ಶಕ್ತಿ ಆಳ ಅಗಲ ಬಲ್ಲವರಾಗಿದ್ದಾರೆ. ಸಿ.ಎಸ್.ವೆಂಕಟೇಶ್ ವೇಮಗಲ್ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿ ಕೋಲಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಸಹ ಆಗಿದ್ದರು.

ಸಿ.ಎಸ್.ವೆಂಕಟೇಶ್ ಸಹ ವರ್ತೂರ್ ಪ್ರಕಾಶ್ ರೀತಿಯಲ್ಲಿಯೇ ಗ್ರಾಮ ಮಟ್ಟದಲ್ಲಿ ಮತದಾರರ ಸಂಪರ್ಕ ಹೊಂದಿದ್ದಾರೆ. ಜೆಡಿಎಸ್ ನಿಂದ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಪ್ರಧಾನಿ ದೇವೇಗೌಡರು ಟಿಕೆಟ್ ನೀಡಿದ್ದರು. ಆದರೆ ಕೆ.ಶ್ರೀನಿವಾಸಗೌಡ ವಿರೋಧ ಮಾಡಿದ ಕಾರಣ ನಾಗನಾಳ ಸೋಮಣ್ಣ ನವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಸೋಮಣ್ಣ ವೆಂಕಟೇಶ್ ಎದುರು ಸೋತು ಸೊರಗಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ ಸಿದ್ದರಾಮಯ್ಯನವರ ಗ್ಯಾರೆಂಟಿ ಯೋಜನೆಗಳ ಜನಪ್ರಿಯತೆಯಿಂದಾಗಿ ಕಾಂಗ್ರೆಸ್ ಸಾರಸಗಟು ಗೆಲ್ಲಲ್ಲಿದೆ ಎಂಬ ಲೆಕ್ಕಾಚಾರದಲ್ಲಿ ಅನಿಲ್ ಕುಮಾರ್ ಮತ್ತು ಕೊತ್ತೂರು ಮಂಜುನಾಥ್ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಅವರಿಗೆ ಏಟಿಗೆ ಎದುರೇಟು ನೀಡಲು ವರ್ತೂರ್ ಪ್ರಕಾಶ್ ಮುಂದಾಗಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ಸೋತರು ಸಹ ವೇಮಗಲ್ ಭಾಗದಲ್ಲಿ ವರ್ತೂರ್ ಪ್ರಕಾಶ್ ಅವರ ಬೆಂಬಲಿಗರಿದ್ದಾರೆ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ.

ಸಿ.ಎಸ್.ವೆಂಕಟೇಶ್ ಅಖಾಡಕ್ಕೆ ಇಳಿದಿರುವುದು ಕಾಂಗ್ರೆಸ್ ಮುಖಂಡರ ನಿದ್ದೆ ಕೆಡಿಸಿದೆ. ಪ್ರತಿಕೂಲ ವಾತಾವರಣದಲ್ಲೂ ನಾಗನಾಳ ಸೋಮಣ್ಣರನ್ನು ಮಣ್ಣುಮುಕ್ಕಿಸಿ ವೆಂಕಟೇಶ್ ಆಯ್ಕೆಯಾಗಿದ್ದರು. ಒಂದು ವೇಳೆ ವೆಂಕಟೇಶ್ ಆಯ್ಕೆಯಾದರೆ ವೇಮಗಲ್-ಕುರುಗಲ್ ಪಟ್ಟಣ ಪಂಚಾಯ್ತಿ ನಿರಾಯಾಸವಾಗಿ ಮಾಜಿ ಶಾಸಕ ವರ್ತೂರ್ ಪ್ರಕಾಶ್ ತೆಕ್ಕೆಗೆ ತೆರಳಲಿದೆ. ಇಡೀ ಅಖಾಡದಲ್ಲಿ ವೆಂಕಟೇಶ್ ಕಾಂಗ್ರೆಸ್‌ಗೆ ಪ್ರಬಲ ಸ್ಪರ್ಧೆ ನೀಡಲಿದ್ದಾರೆ.

ವೇಮಗಲ್-ಕುರುಗಲ್ ಪಟ್ಟಣ ಪಂಚಾಯ್ತಿ ಕೈಗಾರಿಕೆಗಳ ಅಭಿವೃದ್ಧಿಯಿಂದಾಗಿ ಆರ್ಥಿಕವಾಗಿ ಬೆಳೆದಿದೆ. ಪಟ್ಟಣ ಪಂಚಾಯ್ತಿಗೂ ಅನುದಾನ ಮತ್ತು ತೆರಿಗೆ ಹರಿದು ಬರಲಿದೆ. ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದವರು ಪ್ರಭಾವಿ ಆಗಲಿದ್ದಾರೆ. ಅಲ್ಲದೆ ಈ ಭಾಗ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.

ಕೆ.ಸಿ.ವ್ಯಾಲಿ ನೀರನ್ನು ಕುಡಿಸಿ ಪದೇ ಪದೇ ಯಾಮಾರಿಸಿ ಗೌಡರೇ ನೀವೇ ಮುಂದಿನ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದಿದ್ದ ಶ್ರೀನಿವಾಸಪುರದ ಮೇದಾವಿ ರಾಜಕಾರಣಿ ಶ್ರೀನಿವಾಸಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದರು. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ. ಅವರು ಮುಂದಿನ ಮುಖ್ಯಮಂತ್ರಿ ನನ್ನನ್ನು ಎಂಎಲ್ಸಿ ಮಾಡಿ ಉಸ್ತುವಾರಿ ಸಚಿವರನ್ನಾಗಿಸುವ ಭ್ರಮೆಯಲ್ಲಿ ಶ್ರೀನಿವಾಸಗೌಡರಿದ್ದರು. ಆದರೆ ಆಗಿದ್ದೇ ಬೇರೆ ಇಲ್ಲಿನ ಮುಖಂಡರನ್ನು ನಂಬದೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ನನ್ನ ಪತ್ನಿ ಪಾವರ್ತಿಯವರನ್ನು ಕೇಳಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿ ಮೈಸೂರು ಜಿಲ್ಲೆ ವರುಣಾ ದಿಂದ ಸ್ಪರ್ಧಿಸಿದರು. ಹೇಗೂ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂಬುದು ಖಚಿತವಾದ ಮೇಲೆ ಮುಳಬಾಗಿಲಿನಲ್ಲಿ ನಕಲಿ ಪ್ರಮಾಣ ಪತ್ರ ನೀಡಿ ಸ್ಪರ್ಧಿಸಿ ಕಾನೂನು ಹೋರಾಟ ನಡೆಸುತ್ತಿರುವ ಕೊತ್ತೂರು ಮಂಜುನಾಥ್ ರನ್ನು ಕರೆತಂದು ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಯಿತು.

ಒಂದು ಕಡೆ ಅಲ್ಪಸಂಖ್ಯಾತರು ಸಾರಸಗಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಮತ್ತೊಂದಡೆ ಶ್ರೀನಿವಾಸಗೌಡ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಇದರಿಂದ ಕೊತ್ತೂರು ಮಂಜುನಾಥ್ ಆಯ್ಕೆ ಸುಲುಭವಾಯಿತು. ಆಯ್ಕೆಯಾದ ನಂತರ ಮಾಜಿ ಸಚಿವ ಶ್ರೀನಿವಾಸಗೌಡರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಯಿತು. ವಿಧಾನಪರಿಷತ್ ಮೂರು ಸ್ಥಾನಗಳಿಗೆ ಚುನಾವಣೆ ನಡೆದಾಗ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿ ನೀವು ಹೇಳಿದ್ದೀರಿ ಆಗ ನನಗೆ ವಿಧಾನಪರಿಷತ್ ಟಿಕೆಟ್ ನೀಡುವಂತೆ ಕೇಳಿದಾಗ ನನ್ನ ಮಗ ಯತೀಂದ್ರ ಸ್ಪರ್ಧಿಸುತ್ತಾರೆ ನಿಮಗೆ ಟಿಕೆಟ್ ನೀಡುವುದಾಗಿ ನಾನು ಹೇಳಿಲ್ಲ ಎಂದು ಸಿದ್ದರಾಮಯ್ಯ ಜಾರಿಕೊಂಡರು.

ಕೋಲಾರಕ್ಕೆ ವಾಪಸ್ ಬಂದ ಶ್ರೀನಿವಾಸಗೌಡರು ತಾವು ಮೊಸ ಹೋದ ಬಗ್ಗೆ ಆಗಾಗ ಪತ್ರಕರ್ತರ ಮುಂದೆ ಶ್ರೀನಿವಾಸಪುರ ರಮೇಶ್ ಕುಮಾರ್ ನನಗೆ ಮೋಸ ಮಾಡಿದ ಎಂದು ನೋವು ತೋಡಿಕೊಂಡಿದ್ದಾರೆ. ಶ್ರೀನಿವಾಸಗೌಡರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಇದರಿಂದಾಗಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ನವರು ವಿಪರೀತ ಬೆವರು ಸುರಿಸಬೇಕಿದೆ. ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ಜೆಡಿಎಸ್ ಮೈತ್ರಿಯ ದೊಡ್ಡಪಡೆ ಮುಂದಾಗಿದೆ. ಮಾಜಿ ಶಾಸಕ ವರ್ತೂರ್ ಪ್ರಕಾಶ್, ಮಾಜಿ ಸಂಸದ ಮುನಿಸ್ವಾಮಿ, ಸಿಎಂಆರ್ ಶ್ರೀನಾಥ್, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಪ್ರಮುಖರು ಅಖಾಡಕ್ಕೆ ಇಳಿದಿದ್ದಾರೆ.

ಮಾಜಿ ಶಾಸಕ ವರ್ತೂರ್ ಪ್ರಕಾಶ್‌ಗೆ ಕಾಂಗ್ರೆಸ್ ಪಕ್ಷದ ಒಳಮರ್ಮಗಳು ಮತ್ತು ದೌರ್ಬಲ್ಯಗಳು ತಿಳಿದಿದೆ. ಇದರಿಂದಾಗಿ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಕಲಿತ ಪಟ್ಟುಗಳನ್ನು ಈ ಚುನಾವಣೆಯಲ್ಲಿ ಪ್ರಯೋಗ ಮಾಡಲಿದ್ದಾರೆ. ಜೆಡಿಎಸ್ ಮುಖಂಡರಿಗಿಂತ ವರ್ತೂರ್ ಪ್ರಕಾಶ್‌ರನ್ನು ಎದುರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿದೆ.

ಒಂದು ಕಾಲದಲ್ಲಿ ದಿವಂಗತ ಬೈರೇಗೌಡರು ವೇಮಗಲ್ ವಿಧಾನಸಭಾ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದರು. ಅವರು ಹೇಳಿದ್ದೇ ಅಂತಿಮ ಆಗುತ್ತಿತ್ತು. ಅವರ ನಿಧನದ ನಂತರ ಕೃಷ್ಣಭೈರೇಗೌಡರು ಎರಡು ಭಾರಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಆದರೆ ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರಕ್ಕೆ ವಲಸೆ ಹೋದ ನಂತರ ಈ ಹಿಂದೆ ಇದ್ದ ಬೈರೇಗೌಡರ ಅನುಯಾಯಿಗಳು ಚೆದುರಿ ಹೋಗಿದ್ದಾರೆ. ಇದರಿಂದಲ್ಲೇ ವರ್ತೂರ್ ಪ್ರಕಾಶ್ ಎರಡು ಭಾರಿ ನಿರಾಯಾಸವಾಗಿ ಆಯ್ಕೆಗೆ ಸುಲಭವಾಯಿತು.

ಚಿತ್ರ - ಕೋಲಾರ ತಾಲ್ಲೂಕಿನ ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿಯ ಸ್ವಾಗತ ಕಮಾನು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande