ಪತ್ರಕರ್ತರ ಸಹಕಾರ ಸಂಘಕ್ಕೆ ೧.೧೭ಲಕ್ಷ ನಿವ್ವಳ ಲಾಭ
ಪತ್ರಕರ್ತರ ಸಹಕಾರ ಸಂಘಕ್ಕೆ ೧.೧೭ಲಕ್ಷ ನಿವ್ವಳ ಲಾಭ
ಚಿತ್ರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತದ ೨೦೨೪-೨೫ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಾಲ ಮರುಪಾವತಿಯಲ್ಲಿ ಆರ್ಥಿಕ ಶಿಸ್ತು ಪಾಲಿಸಿದ ಚಿಕ್ಕಬಳ್ಳಾಪುರದ ಟಿ.ಎಸ್.ನಾಗೇಂದ್ರಬಾಬುರನ್ನು  ಸನ್ಮಾನಿಸಲಾಯಿತು.


ಕೋಲಾರ, ೦೫ ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿದ್ದೋದ್ಧೇಶ ಸಹಕಾರ ಸಂಘವು ೨೦೨೪-೨೫ ಸಾಲಿನಲ್ಲಿ ೧.೭೧ ಲಕ್ಷ ನಿವ್ವಳ ಲಾಭದೊಂದಿಗೆ ಆಡಿಟ್ ವರದಿಯಲ್ಲಿ ಬಿ ಶ್ರೇಣಿ ದಕ್ಕಿಸಿಕೊಂಡಿದೆಯೆಂದು ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸಂಘದ ೨೦೨೪-೨೫ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಪ್ರತಿ ವರ್ಷ ಸಂಘದಿಂದ ಸುಮಾರು ೬೫ ಮಂದಿ ಪತ್ರಕರ್ತರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಶೇ.೯೦ ಕ್ಕಿಂತಲೂ ಹೆಚ್ಚಿನ ಪ್ರಮಾಣ ಸಾಲ ವಸೂಲಾತಿ ದಾಖಲಾಗಿದೆ, ವಾರ್ಷಿಕ ಸುಮಾರು ೪೦ ಲಕ್ಷ ರೂಪಾಯಿ ವಹಿವಾಟು ನಡೆಸಿದ್ದಲ್ಲದೆ, ೨೦ ಲಕ್ಷ ರೂಗಳಿಗೆ ಹೆಚ್ಚಿನ ಹಣವನ್ನು ಪತ್ರಕರ್ತರಿಗೆ ಸಾಲವಾಗಿ ವಿತರಿಸಿದೆಯೆಂದು ತಿಳಿಸಿದರು.

ಈವರೆವಿಗೂ ಸಂಘದಿಂದ ಯಾವುದೇ ಸಾಲದ ಅರ್ಜಿಯನ್ನು ತಿರಸ್ಕರಿಸಿಲ್ಲ, ಆದರೆ, ಇನ್ನು ಮುಂದೆ ಸಾಲ ಮರುಪಾವತಿಯ ಶಿಸ್ತಿನ ಆಧಾರದ ಮೇಲೆ ಮರು ಸಾಲ ವಿತರಣೆಯನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರ ಸಹಕಾರ ಸಂಘವು ಆರಂಭಿಕ ಐದಾರು ವರ್ಷಗಳನ್ನು ಹೊರತುಪಡಿಸಿದರೆ ಇದೀಗ ತನ್ನ ೧೮ ನೇ ವರ್ಷದ ಸಾಮಾನ್ಯ ಸಭೆಯನ್ನು ಯಶಸ್ವಿಯಾಗಿ ನಡೆಸುತ್ತಿದೆ, ಆರ್ಥಿಕವಾಗಿ ತನ್ನ ಸ್ವಂತ ಬಲದಿಂದಲೇ ಪತ್ರಕರ್ತ ಸದಸ್ಯರಿಗೆ ಸಾಲ ಸೌಲಭ್ಯ ವಿತರಣೆ ಮಾಡಲಾಗುತ್ತಿದೆ, ಇದಕ್ಕಾಗಿ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಹಾಗೂ ಸಂಘದ ಸಿಇಒ ಬಿ.ಎಸ್.ಗಂಗಾಧರ್ ಆರ್ಥಿಕ ಶಿಸ್ತಿನ ಮೂಲಕ ಒಂದು ರೂಪಾಯಿಯೂ ವ್ಯರ್ಥವಾಗದಂತೆ ಎಚ್ಚರವಹಿಸಿ ಸಂಘವನ್ನು ನಡೆಸಿಕೊಂಡು ಬರುತ್ತಿರುವುದೇ ಕಾರಣವಾಗಿದೆಯೆಂದು ವಿವರಿಸಿದರು.

ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಹಿಂದಿನ ವರ್ಷದ ಸಾಮಾನ್ಯ ಸಭೆಯ ನಡವಳಿಕೆಗಳನ್ನು ಓದಿ ಸಭೆಯ ಮುಂದಿಟ್ಟರು, ಮುಂದಿನ ವರ್ಷದ ವಾರ್ಷಿಕ ಬಜೆಟ್ ಅನ್ನು ಸಭೆಯ ಮುಂದೆ ಮಂಡಿಸಿದರು, ಸಭೆಯು ಸರ್ವಾನುಮತದಿಂದ ಅನುಮೋದಿಸಿತು.

ಹಿರಿಯ ಸದಸ್ಯರಾದ ಬಿ.ಸುರೇಶ್ ಮಾತನಾಡಿ, ಪತ್ರಕರ್ತರ ಸಹಕಾರ ಸಂಘದಿಂದ ನಿವೇಶನಗಳನ್ನು ವಿತರಿಸಲು ಕ್ರಮವಹಿಸಬೇಕೆಂದು ಸಲಹೆ ನೀಡಿದರು.

ಮತ್ತೊರ್ವ ಹಿರಿಯ ಸದಸ್ಯ ಪಾ.ಶ್ರೀ.ಅನಂತರಾಮು ಮಾತನಾಡಿ, ಪತ್ರಕರ್ತರ ಸಹಕಾರ ಸಂಘದ ಮೂಲಕ ಪ್ರತಿಯೊಬ್ಬ ಸದಸ್ಯರೂ ಯಶಸ್ವಿನಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಚಿಕ್ಕಬಳ್ಳಾಪುರ ಸದಸ್ಯ ಕೃಷ್ಣ ಮಾತನಾಡಿ, ಸಂಘದ ಕಾರ್ಯಕಾರಿ ಸಮಿತಿ ಸಭೆ ಮತ್ತು ಸೇವಾ ಚಟುವಟಿಕೆಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ ಸಂಘಕ್ಕೆ ಮಹಾ ಪೋಷಕರಾಗಿರುವ ಸಂಘದ ನಿರ್ದೇಶಕರೂ ಆಗಿರುವ ಬ್ಯಾಲಹಳ್ಳಿ ಗೋವಿಂದಗೌಡರು, ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮರು ಆಯ್ಕೆಯಾಗಿದ್ದಕ್ಕೆ ಸಂಘದ ಪರವಾಗಿ ಅಭಿನಂದನೆಗಳನ್ನು ಅರ್ಪಿಸಲಾಯಿತು.

ಸಂಘದ ಸಾಲ ಮರುಪಾವತಿಯಲ್ಲಿ ನಿಯಮಿತವಾಗಿ ಕರಾರುವಕ್ಕಾದ ಶಿಸ್ತು ಪಾಲಿಸಿಕೊಂಡು ಬರುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಟಿ.ಎಸ್.ನಾಗೇಂದ್ರ ಬಾಬು ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.

ಸಾಮಾನ್ಯ ಸಭೆಯ ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಎಚ್.ಎನ್.ಮುರಳೀಧರ್, ಎ.ಸದಾನಂದ, ನಾರಾಯಣದಾಸ್, ದುನಿಯಾ ಮುನಿಯಪ್ಪ, ಎಂ.ಸೋಮಶೇಖರ್, ಎಚ್.ಎಲ್.ಸುರೇಶ್, ಎಂ.ನಾಗರಾಜಯ್ಯ, ರಾಜೇಂದ್ರ ಸಿಂಹ, ಎಸ್.ರವಿಕುಮಾರ್, ಶಬ್ಬೀರ್ ಅಹಮದ್, ವಿ.ಮುನಿರಾಜು, ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.

ನಾಗೇಂದ್ರ ಬಾಬು ಪ್ರಾರ್ಥಿಸಿ, ನಿರ್ದೇಶಕರಾದ ಎ.ಜಿ.ಸುರೇಶ್ಕುಮಾರ್ ಸ್ವಾಗತಿಸಿ, ಸಿ.ವಿ.ನಾಗರಾಜ್ ವಂದಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸಹಕಾರ ಸಂಘದ ಸದಸ್ಯರಾಗಿರುವ ಶೇರುದಾರರು ಸಾಮಾನ್ಯ ಸಭೆಗೆ ಆಗಮಿಸಿ ಯಶಸ್ವಿಗೊಳಿಸಿದರು. ಸಂಘದ ಹಿರಿಯ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡರು ಸದಸ್ಯರಿಗೆ ಭೋಜನ ವ್ಯವಸ್ಥೆ ಮಾಡಿಸಿದ್ದರು.

ಚಿತ್ರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತದ ೨೦೨೪-೨೫ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಾಲ ಮರುಪಾವತಿಯಲ್ಲಿ ಆರ್ಥಿಕ ಶಿಸ್ತು ಪಾಲಿಸಿದ ಚಿಕ್ಕಬಳ್ಳಾಪುರದ ಟಿ.ಎಸ್.ನಾಗೇಂದ್ರಬಾಬುರನ್ನು ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande