ಗದಗ, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಗಜೇಂದ್ರಗಡ ತಾಲೂಕು ಪಂಚಾಯತಿಗೆ ನೂತನವಾಗಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿರುವ ಚಂದ್ರಶೇಖರ್ ಬಿ, ಕಂದಕೂರ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಸ್ಥಳೀಯ ತಾಪಂ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಇಒ ಮಂಜುಳಾ ಹಕಾರಿ ಅವರಿಂದ ಅಧಿಕಾರವನ್ನು ಸ್ವೀಕರಿಸಿದರು. ನಿರ್ಗಮಿತ ಇಓ ಮಂಜುಳಾ ಹಕಾರಿ ಅವರು ನೂತನ ಇಒ ಚಂದ್ರಶೇಖರ ಬಿ ಕಂದಕೂರ ಅವರಿಗೆ ಶುಭ ಹಾರೈಸಿದರು.
ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಚಂದ್ರಶೇಖರ್ ಬಿ ಅವರು ಕಾರ್ಯೋತ್ಸಾಹ ತೋರಿಸಿ, ಗೋಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು. ಶಾಲೆಯ ಬೋಧಕ ಹಾಗೂ ಮೂಲಭೂತ ಸೌಕರ್ಯಗಳ ಕುರಿತಾಗಿ ತಾತ್ಕಾಲಿಕವಾಗಿ ತಾಪಂ ಕಚೇರಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಇಒ, ಶಾಲೆಯ ಕೊಠಡಿಗಳ ಸ್ಥಿತಿಗತಿಯ ಪರಿಶೀಲನೆ ನಡೆಸಿ, ಶಿಕ್ಷಕರೊಂದಿಗೆ ಚರ್ಚಿಸಿದರು. ದುರಸ್ತಿ ಅಗತ್ಯವಿರುವ ಕೊಠಡಿಗಳ ಕುರಿತು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿದ ಅವರು, ಮುಂದಿನ ಆರ್ಥಿಕ ವರ್ಷದಲ್ಲಿ ಆದ್ಯತೆಯ ಆಧಾರದಲ್ಲಿ ಅನುದಾನ ಮಂಜೂರಾತಿ ಮಾಡುವ ಭರವಸೆ ನೀಡಿದರು.
ಈ ಹಿಂದೆ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅನುಭವವುಳ್ಳ ಚಂದ್ರಶೇಖರ್ ಕಂದಕೂರ ಅವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ವಿದ್ಯೆಯ ಮಹತ್ವದ ಬಗ್ಗೆ ಸಲಹೆ ನೀಡಿದರು. “ವಿದ್ಯಾರ್ಥಿಗಳ ಜೀವನ ಬಂಗಾರದಂತೆ; ಇಂತಹ ಪ್ರಾಯದಲ್ಲಿ ಅಧ್ಯಯನವೇ ಪ್ರಾಮುಖ್ಯ. ಬೇರೆ ವಿಚಾರಗಳಿಗೆ ಸಮಯ ವ್ಯಯಿಸದೆ, ಕಲಿಕೆಗೆ ಹೆಚ್ಚು ಸಮಯ ನೀಡಬೇಕು,” ಎಂದು ಮಾರ್ಗದರ್ಶನ ನೀಡಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಬಿಸಿ ಯೂಟವನ್ನು ಸೇವಿಸಿ, ಆಹಾರದ ಗುಣಮಟ್ಟ ಮತ್ತು ಅಡುಗೆಯ ರುಚಿಯ ಕುರಿತು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಸೇರಿದಂತೆ ವಿಧ್ಯಾರ್ಥಿಗಳು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ತಾಲೂಕ ನರೇಗಾ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP