ಬಳ್ಳಾರಿ, 5 ಆಗಸ್ಟ್ (ಹಿ.ಸ.)
ಆ್ಯಂಕರ್: ಆಶಾ ಕಾರ್ಯಕರ್ತೆಯರ ಗೌರವಧನ, ಸೇವಾ ಭದ್ರತೆ ಮತ್ತು ನಿವೃತ್ತಿ ನಂತರದ ಸೌಲಭ್ಯಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 10 ರಂದು ನೀಡಿದ್ದ `ಭರವಸೆಗಳನ್ನು' ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಆಗಸ್ಟ್ 12 ರಿಂದ ಮೂರು ದಿಗನಳ ಕಾಲ `ಆಹೋರಾತ್ರಿ' ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ್ದು, ಆಶಾಗಳಲ್ಲಿಯ ಸುಗಮಕಾರರನ್ನು ಏಕಾಏಕಿ ವಜಾ ಮಾಡಿರುವುದು ಮಹಿಳಾ ವಿರೋಧಿ ನಿಲುವಾಗಿದೆ. ಅಲ್ಲದೇ, ಆಶಾ ಕಾರ್ಯಕರ್ತೆರಿಗೆ ಗೌರವ ಧನ ಹೆಚ್ಚಳ ಕುರಿತು ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದರು.
60 ವರ್ಷ ವಯಸ್ಸು ಪೂರ್ಣಗೊಳಿಸಿರುವ ಆಶಾ ಕಾರ್ಯಕರ್ತೆಯರನ್ನು ಯಾವುದೇ ಪರಿಹಾರಗಳನ್ನು ನೀಡದೇ ನಿವೃತ್ತಿಗೆ ಒಳಪಡಿಸುವುದು ಸರಿಯಲ್ಲ. ಆಶಾಗಳ ಸೇವೆಯ ಮೌಲ್ಯಮಾಪನ, ಇನ್ನಿತರೆ ವಿಚಾರಗಳಿಂದ ಆಶಾಗಳ ಸೇವೆಯನ್ನು ಅವಮಾನಿಸುವ ಕೆಲಸ ಸರ್ಕಾರದಿಂದ ನಡೆದಿದೆ. ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ರಾಜ್ಯವ್ಯಾಪಿ ಜಿಲ್ಲಾ ಮಟ್ಟದ ಆಹೋರಾತ್ರಿ ಪ್ರತಿಭಟನಾ ಧರಣಿ ಆಗಸ್ಟ್ 12 ರಿಂದ ಮೂರು ದಿನಗಳ ಕಾಲ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಜನವರಿ 10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾಗ, ಮುಖ್ಯಮಂತ್ರಿಗಳು ಏಪ್ರಿಲ್ 2025 ರಿಂದ ಆಶಾ ಕಾರ್ಯಕರ್ತೆಯರಿಗೆ ಪೆÇ್ರೀತ್ಸಾಹಧನ ಸೇರಿಸಿ ಕನಿಷ್ಠ ರೂ. 10,000 ಗಳ ಗೌರವಧನ ಪಾವತಿ ಸೇರಿ ನಾನಾ ಸೌಲಭ್ಯಗಳ ಭರವಸೆ ನೀಡಿದ್ದರು. `ಆಹೋರಾತ್ರಿ' ಪ್ರತಿಭಟನೆಯ ಮೂಲಕ ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ತಮ್ಮ ಅಹವಾಲು ತಲುಪಿಸುವ ಪ್ರಯತ್ನ ನಡೆಸಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್