ಮಂಗಳೂರು, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳದ ನೇತ್ರಾವತಿ ನದಿ ತೀರದ ಕಾಡಿನಲ್ಲಿ ನಡೆಯುತ್ತಿರುವ ವಿಶೇಷ ತನಿಖಾ ತಂಡದ ಉತ್ಖನನ ಕಾರ್ಯಾಚರಣೆಗೆ ಮಹತ್ವದ ತಿರುವು ಸಿಕ್ಕಿದೆ. ನಿನ್ನೆ ಗುರುತಿಸಲಾದ 11ನೇ ಸ್ಥಳದ ಬದಲಿಗೆ ಅನಾಮಿಕ ದೂರುದಾರ ಹೊಸ ಜಾಗವೊಂದಕ್ಕೆ ಕರೆದೊಯ್ದ ಸ್ಥಳದಲ್ಲಿ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿದೆ.
ಈ ಘಟನೆ ಪ್ರಕರಣಕ್ಕೆ ಹೊಸ ಆಯಾಮವನ್ನು ನೀಡಿದ್ದು, ಶವದ ಮೂಲ ಹಾಗೂ ಸಂಬಂಧಿತ ಪ್ರಕರಣದ ಮಾಹಿತಿ ಖಚಿತಪಡಿಸಿಕೊಳ್ಳಲು ವಿಧಿ ವಿಜ್ಞಾನ ತಜ್ಞರ ನೆರವು ಪಡೆಯಲಾಗಿದೆ. ಬಂಗ್ಲಗುಡ್ಡ ಕಾಡಿನಲ್ಲಿರುವ ಈ ಸ್ಥಳವು ಮೊದಲು ಗುರುತಿಸಲ್ಪಟ್ಟ ತಗ್ಗು ಪ್ರದೇಶಗಳಿಗಿಂತ ಎತ್ತರದಲ್ಲಿದ್ದು, ಇದೀಗ ತನಿಖೆಯ ದಿಕ್ಕು ಎತ್ತರದ ಪ್ರದೇಶಗಳತ್ತ ತಿರುಗಿದೆ.
ಎಸ್‌ಐಟಿ ಇದೀಗ ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿದ್ದು, ಮುಂದಿನ ಉತ್ಖನನ ಸ್ಥಳಗಳನ್ನು ನಿಗದಿಪಡಿಸುತ್ತಿದೆ. ಈ ಮಧ್ಯೆ, 11 ಮತ್ತು 12ನೇ ಸ್ಥಳಗಳಲ್ಲಿ ಉತ್ಖನನ ಮುಂದುವರಿಸುವ ಅಥವಾ ಹೊಸ ಸ್ಥಳವೊಂದನ್ನು ಆರಿಸುವ ಬಗ್ಗೆ ಇಂದು ನಿರ್ಧಾರವಾಗುವ ನಿರೀಕ್ಷೆಯಿದೆ.
ಉತ್ಖನನ ಕಾರ್ಯಾಚರಣೆಯಲ್ಲಿ ಎಸ್ಐಟಿ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದು ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸುತ್ತಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa