ಉತ್ತರಕಾಶಿ, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹರ್ಷಿಲ್ ಪ್ರದೇಶದ ಧರಾಲಿ ಗ್ರಾಮದಲ್ಲಿ ತೀವ್ರ ಮೇಘಸ್ಫೋಟ ಸಂಭವಿಸಿ, ಖೀರ್‌ಗಂಗಾ ನದಿಯಲ್ಲಿ ವಿಪರೀತ ಪ್ರವಾಹ ಉಂಟಾಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಪ್ರವಾಹದಿಂದಾಗಿ ಧರಾಲಿ ಗ್ರಾಮ ಅಸ್ತಿತ್ವ ಕಳೆದುಕೊಂಡಿದ್ದು ಸುಮಾರು 20 ರಿಂದ 25 ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಸಂಪೂರ್ಣವಾಗಿ ನಾಶವಾಗಿದ್ದು, ಅಪಾರ ಆಸ್ತಿ ಹಾನಿಯಾಗಿದೆ.
ಜಲಾನಯನ ಪ್ರದೇಶದಲ್ಲಿ ಸಂಭವಿಸಿದ ಮೇಘ ಸ್ಫೋಟದಿಂದಾಗಿ ನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ . ಇದರ ಪರಿಣಾಮವಾಗಿ ಕೆಲವೊಂದು ಕಟ್ಟಡಗಳು ನೆಲಸಮವಾಗಿವೆ. ಘಟನೆಯಲ್ಲಿ 10ಕ್ಕೂ ಅಧಿಕ ಜನರು ಅವಶೇಷಗಳ ಕೆಳಗೆ ಸಿಕ್ಕಿಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನದಿಯ ಪ್ರವಾಹದ ತೀವ್ರತೆಗೆ ಅರಿತ ಮುಖ್ವಾ ಗ್ರಾಮದ ಜನರು ಇತರರಿಗೆ ಎಚ್ಚರಿಕೆ ನೀಡಿದ ಕಾರಣ, ಹೆಚ್ಚಿನ ಪ್ರಮಾಣದ ಮಾನವ ಹಾನಿಯಿಂದ ತಪ್ಪಿದೆ.
ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪರಿಸ್ಥಿತಿ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಎಲ್ಲರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಪರಿಹಾರ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಜಿಲ್ಲಾಡಳಿತ ಹಾಗೂ ಸಂಬಂಧಿತ ಸಂಸ್ಥೆಗಳ ತಂಡಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa