ರಾಯಚೂರು, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ನಗರದ ಆಶಾಪುರ ರಸ್ತೆಯಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಬಾಲ ಮಂದಿರದ ಅಡುಗೆ ಕೋಣೆಯ ವೀಕ್ಷಣೆ ನಡೆಸಿ, ಪ್ರತಿ ದಿನ ಮಕ್ಕಳಿಗೆ ನೀಡುತ್ತಿರುವ ಆಹಾರದ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಮರೇಶ್ ಹಾವಿನ್ ಅವರಿಂದ ಮಾಹಿತಿ ಪಡೆದರು. ನಂತರ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ಶಿಕ್ಷಣ, ಮೂಲಭೂತ ಸೌಲಭ್ಯಗಳು ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಿದರು.
ಮಕ್ಕಳು ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮವಾಗಿ ಅಭ್ಯಾಸ ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಾಲ ಮಂದಿರದಲ್ಲಿ ಅನಾಥ ಮಕ್ಕಳು, ಕಾಣೆಯಾದ ಮಕ್ಕಳ, ಬಾಲ ಕಾರ್ಮಿಕ, ಬಾಲ್ಯ ವಿವಾಹ ಹಾಗೂ ಇತರೆ ಸಮಸ್ಯೆಗಳಿಂದ ರಕ್ಷಿಸಲಪಟ್ಟ ಮಕ್ಕಳು ಇದ್ದು, ಮಕ್ಕಳಿಗೆ ದೈನಂದಿನ ಮೆನು ಪ್ರಕಾರ ಆಹಾರ ವಿತರಣೆ ಇತರೆ ಸೌಲತ್ತುಗಳನ್ನು ನೀಡಬೇಕು. ಮಕ್ಕಳಿಗೆ ಸಂಗೀತ ಅಭ್ಯಾಸ, ಒತ್ತಡ ನಿರ್ವಹಣೆ ತರಗತಿಗಳನ್ನು ಆಯೋಜಿಸಬೇಕು ಎಂದರು.
ನಂತರ ಬಾಲ ಮಂದಿರದ ಮಗುವಿನ ಜನ್ಮದಿನ ಆಚರಿಸುವ ಮೂಲಕ ಅಪರ ಜಿಲ್ಲಾಧಿಕಾರಿಗಳು ಮಕ್ಕಳ ಖುಷಿಯಲ್ಲಿ ಪಾಲ್ಗೊಂಡರು.
ಮಕ್ಕಳ ಶಿಕ್ಷಣ, ರಕ್ಷಣೆ, ಆರೋಗ್ಯ ಮತ್ತು ಇತರೆ ವಿಷಯಗಳ ಕುರಿತು ಹೆಚ್ಚು ಕಾಳಜಿಯಿಂದ ಕೆಲಸ ಮಾಡಬೇಕೆಂದು ಸಿಬ್ಬಂದಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಬಾಲ ಮಂದಿರದ ಅಧೀಕ್ಷಕರಾದ ಭಾರತಿ ನಾಯಕ್, ರಾಧಾ ಭಾಯಿ, ಕಾನೂನು ಪರಿವೀಕ್ಷಣಾ ಅಧಿಕಾರಿ ಶಿವರಾಜ್ ಪಾಟೀಲ್ ಸೇರಿದಂತೆ ಬಾಲ ಮಂದಿರದ ಸಿಬ್ಬಂದಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್