ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ
ಹೊಸಪೇಟೆ, 04 ಆಗಸ್ಟ್ (ಹಿ.ಸ.) : ಆ್ಯಂಕರ್ : ಸರ್ಕಾರದ ಮಹತ್ವಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ, ಬಡವರ್ಗದ ಅರ್ಹ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ, ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಮಾಡಬೇಕು ಎಂದು ರಾಜ್ಯ ಗ್ಯಾರ
ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ


ಹೊಸಪೇಟೆ, 04 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸರ್ಕಾರದ ಮಹತ್ವಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ, ಬಡವರ್ಗದ ಅರ್ಹ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ, ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಮಾಡಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ಅವರು ಹೇಳಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಅನುಷ್ಟಾನ ಸಮಿತಿಯ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು, ಈಗಾಗಲೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ವರ್ಗ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿರುವುದರಿಂದಲೇ ಫಲಾನುಭವಿಗಳಿಗೆ ಯೋಜನೆಗಳ ಲಭ್ಯತೆ ಸಕಾರವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿಂದ ಅರ್ಹ ಫಲಾನುಭವಿಗಳು ಯೋಜನೆಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದರೇ ಅಂತಹ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲು ಸಮಿತಿ ಸದಸ್ಯರು ಕಾರ್ಯೋನ್ಮುಖರಾಗಬೇಕಿದೆ.

ವಿಶೇಷವಾಗಿ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಲ್ಲಿ 8007 ಜನ ಯುವಕರು ನೊಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ವಿಜಯನಗರ ಜಿಲ್ಲೆಯಿಂದಲೇ ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯಾಧಾರಿತ ತರಬೇತಿ ಕಾರ್ಯಾಗಾರವನ್ನು ನೀಡಲು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುವುದು.

ನಿರುದ್ಯೋಗಿ ಯುವಕರು, ಯುವನಿಧಿ ಪಲಾನುಭವಿಗಳಿಗೆ ಅಗತ್ಯವಿರುವ ಕೌಶಲ್ಯಾಧಾರಿತ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವ ಆತ್ಮಸ್ಥೈರ್ಯವನ್ನು ತುಂಬಬೇಕಿದೆ. ಬಹುತೇಕ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳ ಅಗತ್ಯವಿದೆ. ಅಂತಹ ಕಂಪನಿಗಳಿಗೆ ಇಲ್ಲಿನ ಯುವಕರಿಗೆ ಉದ್ಯೋಗ ಕಲ್ಪಿಸುವ ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸಹಯೋಗದಲ್ಲಿ ವಿಶೇಷ ಕಾರ್ಯಾಗಾರವನ್ನು ನೀಡಲು ಸಿದ್ಧತೆಗೆ ಮುಂದಾಗಲಿದ್ದೇವೆ ಎಂದರು.

ಸಮಿತಿ ಸದಸ್ಯ ಪರಶುರಾಮ ಮಾತನಾಡಿ, ಈಗಾಗಲೇ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿಯಿಂದ ಗ್ರಾಪಂ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ಆಲಿಸುವ ಕಾರ್ಯವಾಗುತ್ತಿದೆ. ಶಕ್ತಿ ಯೋಜನೆಯ ಮೂಲಕ ಸಮಸ್ಯೆಗಳಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ವೇಳೆಗೆ ಬಸ್‍ಗಳ ಕೊರತೆಯನ್ನು ನೀಗಿಸಲಾಗಿದೆ. ಹಗರಿಬೊಮ್ಮನಹಳ್ಳಿ ಡಿಪೋದಲ್ಲಿ ಸುಮಾರು 27 ಚಾಲಕ ಕಂ ನಿರ್ವಾಹಕರ ಸಿಬ್ಬಂದಿ ಕೊರತೆಯಿದೆ. 15 ಬಸ್‍ಗಳ ಅಗತ್ಯವಿದೆ ಎಂದು ತಿಳಿದುಬಂದಿದೆ. ವಿಭಾಗೀಯ ನಿಯಂತ್ರಣಾಧಿಕಾರಿಗಳು ವಿವಿಧ ಡಿಪೋಗಳಲ್ಲಿರುವ ಸಿಬ್ಬಂದಿ ಕೊರತೆ ನಿರ್ವಹಿಸಲು ಮುಂದಾಗಬೇಕು ಎಂದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಭಾಗ್ಯಲಕ್ಷ್ಮೀ ಭರಾಡ ಮಾತನಾಡಿ, ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ಪ್ರವಾಸಿಗರು ಆಗಮಿಸುವ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ನಿಲ್ದಾಣದಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆ, ಶೌಚಾಲಯಗಳ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು. ಮಧ್ಯಪ್ರವೇಶಿಸಿದ ವಿಭಾಗೀಯ ಸಂಚಾರ ಅಧಿಕಾರಿ ರಾಜಶೇಖರ್.ಬಿ.ವಾಜಂತ್ರಿ ಪ್ರತಿಕ್ರಿಯಿಸಿ ಬಸ್ ನಿಲ್ದಾಣದಲ್ಲಿನ ದೋಷಗಳನ್ನು ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸದಸ್ಯರಾದ ಗೀರೀಶ್ ಗೌರಜ್ಜನವರ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಲ್ಲಿ ಮರಣ ಹೊಂದಿದ ಫಲಾನುಭವಿಗಳ ಖಾತೆಯಲ್ಲಿರುವ ಹಣವನ್ನು ನಾಮಿನಿಗಳಿಗೆ ನೀಡಲು ಬ್ಯಾಂಕ್‍ಗಳಿಂದ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಜಿಪಂ ಸಿಇಒರವರು ಬ್ಯಾಂಕ್‍ಗಳಿಗೆ ನಿಯಮಾನುಸಾರ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಮಾತನಾಡಿ, ಬ್ಯಾಂಕಿನ ಸಮಸ್ಯೆಗಳಿಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗುವುದು. ಅಹಾರ ಇಲಾಖೆಯಲ್ಲಿ ಹೊಸ ಪಡಿತರ ಅರ್ಜಿಗೆ ಅವಕಾಶ ನೀಡಿಲ್ಲ. ಈಗಾಗಲೇ ಶೇ.90 ರಷ್ಟು ಪಡಿತರ ನೊಂದಣಿ ಕಾರ್ಯವಾಗಿದೆ. ಹಾಗೂ ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಿ ರೇಷನ್ ಕಾರ್ಡ್‍ಗಳಲ್ಲಿ ಸೇರಿಸುವ ಪ್ರಕ್ರಿಯೆ ನಿರಂತರವಾಗಿ ಅವಕಾಶ ನೀಡಲಾಗಿದೆ. ಸಮಿತಿ ಸದಸ್ಯರು ಅಂತಹ ಪ್ರಕರಣಗಳಿದ್ದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಪ್ರಾಧಿಕಾರದ ಉಪಾಧ್ಯಕ್ಷರಾದ ಕೆ.ಬದಾವಲಿ, ಕೆ.ಎಸ್.ಶಾಂತನಗೌಡ, ಹೆಚ್.ಜಂದಿಸಾಹೇಬ್ ಸದಸ್ಯರಾದ ಭಾಗ್ಯಲಕ್ಷ್ಮೀ ಭರಾಡ, ಎಸ್.ಯರ್ರಿಸ್ವಾಮಿ, ಡಿ.ವೆಂಕಟರಮಣ, ಪ್ರಭಾಕರ್, ಶೇಕ್ ಮಹಮ್ಮದ್ ಜೀಲಾನ್, ಸೊನ್ನದ ಗುರುಬಸವರಾಜ್, ದೇವರಾಜ್.ಪಿ.ಹೆಚ್, ಪರಶುರಾಮ, ಗೌರಜ್ಜನವರ್ ಗೀರೀಶ್, ಜಿಪಂ ಯೋಜನಾಧಿಕಾರಿ ಜೆ.ಎಂ.ಅನ್ನದಾನಸ್ವಾಮಿ, ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಟ್ಟಪ್ಪ, ಹೊಸಪೇಟೆ ವಿಭಾಗದ ಕೆಕೆಆರ್‍ಟಿಸಿ ಅಧಿಕಾರಿ ರಾಜಶೇಖರ್, ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಸತೀಶ್ ಕುಮಾರ ಸಭೆಯಲ್ಲಿ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande