ಬೆಂಗಳೂರು, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : 18 ವರ್ಷಗಳ ಬಳಿಕ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಜಯಗಳಿಸಿದಾಗ ಜಗತ್ತಿನಾದ್ಯಂತ ಸಂಭ್ರಮದ ಅಲೆ ಹರಡಿತ್ತು. ಆದರೆ ಆ ಗೆಲುವಿನ ಖುಷಿ ಕೇವಲ 24 ಗಂಟೆಗಳಿಗೆ ಸೀಮಿತವಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಿಂದ ೧೧ ಮಂದಿ ಸಾವಿಗೀಡಾದ ದುರ್ಘಟನೆ ನಡೆದಿತ್ತು.
ಈ ದುರ್ಘಟನೆಯ ಬಳಿಕ ಆರ್‌ಸಿಬಿ ತಂಡ ಸಂಪೂರ್ಣ ಮೌನವಾಗಿತ್ತು, ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ತಲಾ ೨೫ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಈ ಕುರಿತು ಆರ್‌ಸಿಬಿ ತನ್ನ ಅಧಿಕೃತ ಎಕ್ಸ ಖಾತೆಯಲ್ಲಿ ಪ್ರಕಟಣೆ ಬಿಡುಗಡೆ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಭಿಮಾನಿ ಕುಟುಂಬದ 11 ಸದಸ್ಯರನ್ನು ಕಳೆದುಕೊಂಡಿರುವುದನ್ನು ಗಂಭೀರ ಮನೋಭಾವದಿಂದ ಸ್ಮರಿಸಿದೆ. “ಜೂನ್ 4, 2025 ನಮ್ಮ ಹೃದಯಗಳನ್ನು ಮುರಿದ ದಿನ,” ಎಂದು ತಂಡವು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮೃತ ಕುಟುಂಬಗಳಿಗೆ ಸಾಂತ್ವನ ಸೂಚಿಸಲು ಹಾಗೂ ನೆರವಾಗುವ ಉದ್ದೇಶದಿಂದ ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ ₹25 ಲಕ್ಷ ನೆರವು ಒದಗಿಸಿದೆ. ಈ ನೆರವು ಕೇವಲ ಆರ್ಥಿಕ ನೆರವಲ್ಲದೆ, ಸಹಾನುಭೂತಿ, ಏಕತೆ ಮತ್ತು ನಿರಂತರ ಆರೈಕೆಯ ಭರವಸೆಯೂ ಆಗಿದೆ ಎಂದು ತಂಡವು ಘೋಷಿಸಿದೆ.
ಅಭಿಮಾನಿಗಳ ಸ್ಮರಣೆಯನ್ನು ಗೌರವಿಸುವ ಮೂಲಕ ಆರಂಭವಾಗಿರುವ ಈ ಹೆಜ್ಜೆಯನ್ನು “ಆರ್‌ಸಿಬಿ ಕೇರ್ಸ ” ಎಂಬ ವಿಶೇಷ ಅಭಿಯಾನವಾಗಿ ಮುಂದುವರಿಸಲು ತಂಡ ನಿರ್ಧರಿಸಿದ್ದು, ದೀರ್ಘಾವಧಿಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
“ಅವರು ಬಿಟ್ಟು ಹೋದ ಜಾಗವನ್ನು ಯಾವುದೇ ರೀತಿಯಲ್ಲಿ ತುಂಬಲು ಸಾಧ್ಯವಿಲ್ಲ. ಆದರೆ ಅಭಿಮಾನಿಗಳು ಏನು ಅನುಭವಿಸುತ್ತಾರೆ, ಏನು ನಿರೀಕ್ಷಿಸುತ್ತಾರೆ ಮತ್ತು ಏನು ಅರ್ಹರಾಗಿದ್ದಾರೆ ಎಂಬುದನ್ನು ಪ್ರತಿಬಿಂಬಿಸುವ ಬದ್ಧತೆ ನಮ್ಮದು,” ಎಂದು ಆರ್‌ಸಿಬಿ ತಂಡ ತನ್ನ ಸಂದೇಶದಲ್ಲಿ ಸ್ಪಷ್ಟಪಡಿಸಿದೆ.
ಆರ್‌ಸಿಬಿ ಕೇರ್ಸ ಕುರಿತ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa