ರಾಯಚೂರು, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಹಯೋಗದೊಂದಿಗೆ ವಸತಿ ನಿಲಯ ಅಧಿಕಾರಿ ಸಿಬ್ಬಂದಿಗೆ ಡೆಂಗೆ ವಿರೋಧಿ ಮಾಸಾಚರಣೆ ಅಂಗವಾಗಿ ಒಂದು ದಿನದ ಕಾರ್ಯಗಾರ ನಡೆಯಿತು.
ಕಾರ್ಯಾಗಾರಕ್ಕೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ಚಂದ್ರಶೇಖರಯ್ಯ ಸ್ವಾಮಿ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು.
ಈ ವೇಳೆ ಅವರು ಮಾತನಾಡಿ, ಜಗತ್ತಿನಲ್ಲಿ ಹಲವಾರು ಜಾತಿಯ ಸೊಳ್ಳೆಗಳಿವೆ. ಆದರೆ ಈಡೀಸ್ ಈಜಿಪ್ಟ್, ಅನಾಫಿಲಿಸ್, ಕ್ಯೂಲೆಕ್ಸ ಈ ಮೂರು ಸೊಳ್ಳೆಗಳು ಮನುಷ್ಯರನ್ನು ಕಾಡುವಂತಹವು. ಡೆಂಗೆ ಜ್ವರ ವೈರಸ್ ನಿಂದ ಬರುವ ಕಾಯಿಲೆ, ಸಾಂಕ್ರಾಮಿಕ ರೋಗವಾಗಿದ್ದು, ಈಡೀಸ್ ಈಜಿಪ್ಟೈ ಎಂಬ ಹೆಣ್ಣು ಸೋಂಕಿತ ಸೊಳ್ಳೆ ಕಚ್ಚುವುದರಿಂದ ಬರುವ ಕಾಯಿಲೆ. ಇದು ಹಗಲಲ್ಲೆ ಕಚ್ಚುತ್ತತ್ತೆ. ಈಡಿಸ್ ಈಜಿಪ್ಟೈ ಸೊಳ್ಳೆಗೆ ಟೈಗರ್ ಸೊಳ್ಳೆಯಂತಲೂ ಕರೆಯುತ್ತಾರೆ ಎಂದರು.
ಈ ಸೊಳ್ಳೆಯು ಸ್ವಚ್ಚವಾದ ನೀರಿನಲ್ಲಿ ಬೆಳೆಯುತ್ತದೆ. ನೂರರಿಂದ ಇನ್ನೂರು ತತ್ತಿಗಳನ್ನು ಇಡುತ್ತದೆ. ನೀರಿನ ಪರಿಕರಗಳಲ್ಲಿ, ಘನ ತ್ಯಾಜ್ಯ ವಸ್ತುಗಳಲ್ಲಿ, ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತವೆ. ನಿಂತ ನೀರು ಸೊಳ್ಳೆ ಉತ್ಪತ್ತಿ ತಾಣಗಳು ಎಂದು ತಿಳಿಸಿದರು.
ಡೆಂಗೆ ರಕ್ತಸ್ರಾವ ಡೆಂಗೆ ಶಾಕ್ ಸಿಂಡ್ರೋಮ್, ಡೆಂಗೆ ಜ್ವರಕ್ಕೆ ಚಿಕಿತ್ಸೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸ್ವಯಂ ರಕ್ಷಣಾ ವಿಧಾನಗಳಾದ ಮೈ ತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಬಳಕೆ, ಕಿಡಿಕಿಗಳಿಗೆ ಜಾಲರಿ ಅಳವಡಿಕೆ, ಗುಡ್ ನೈಟ್ ಕ್ವಾಯಿಲ್ ಬಳಕೆ, ಸೊಳ್ಳೆ ನಾಶಕ ಬ್ಯಾಟ್‍ನಂತಹ ಸ್ವಯಂ ರಕ್ಷಣಾ ವಿಧಾನ, ರಾಸಾಯನಿಕ ವಿಧಾನ, ಜೈವಿಕ ವಿಧಾನಗಳ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ಮಾಡಿದರು.
ಈ ವೇಳೆ ತಾಲೂಕ ಆರೋಗ್ಯಾಧಿಕಾರಿ ಡಾ. ಪ್ರಜ್ವಲ್ ಕುಮಾರ ಅವರು ಮಾತನಾಡಿ, ನೀರಿನ ಪರಿಕರಗಳು ವಾರಕ್ಕೊಮ್ಮೆ ತೊಳೆದು ಒಣಗಿಸಬೇಕು. ಡ್ರೈ-ಡೇ ಮಾಡಬೇಕು. ಯಾವುದೇ ಜ್ವರ ಇರಲಿ ಹತ್ತಿರ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಡೆಂಗೆ ಜ್ವರ ನಿಯಂತ್ರಣ ನಮ್ಮೆಲ್ಲರ ಜವಬ್ದಾರಿ. ಪ್ರತಿಯೊಂದು ವಸತಿ ನಿಲಯದ ಒಳಾಂಗಣ ಹೊರಾಂಗಣ ಸುತ್ತಲು ಸ್ವಚ್ಚತೆಗೆ ಆದ್ಯತೆ ಕೊಡಬೇಕು ವಿದ್ಯಾರ್ಥಿಗಳಿಗೆ ಯಾವುದೇ ಜ್ವರ ಇರಲಿ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಿ ರಕ್ತ ಪರೀಕ್ಷೆ ಮಾಡಿಸಬೇಕೆಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ.ಕೆ, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕರಾದ ಸಂಧ್ಯಾ, ವಿವಿಧ ವಸತಿ ನಿಲಯಪಾಲಕರಾದ ಗಂಗಣ್ಣ, ನಾಗೇಂದ್ರ, ನಾಗವೇಣಿ, ಸುಕುಮಾರ್ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್