ಬೆಂಗಳೂರು, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ಒಂದು ಹಂತದಲ್ಲಿ ಜಾಗತಿಕ ಹಿನ್ನಡೆಯಲಿದ್ದ ಭಾರತದ ಜವಳಿ ಉದ್ಯಮ ಇದೀಗ ವಿಶ್ವ ಮಟ್ಟಕ್ಕೆ ಬೆಳೆಯುತ್ತಿದೆ. ಭವಿಷ್ಯದಲ್ಲಿ ʼಗ್ಲೋಬಲ್ ಟೆಕ್ಸ್‌ಟೈಲ್ ಹಬ್ʼ ಆಗುವತ್ತ ದಾಪುಗಾಲಿರಿಸಿದೆ. ದೇಶದ ಆರ್ಥಿಕತೆಗೆ ಜೀವಾಳ ಎನ್ನುವಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸುತ್ತಿದೆ.
ಜಾಗತಿಕವಾಗಿ ಈವರೆಗೆ ಚೀನಾ, ವಿಯೆಟ್ನಾಂ, ಬಾಂಗ್ಲಾದೇಶ ಮಾತ್ರ ಹಲವಾರು ವರ್ಷಗಳಿಂದ ವಿಶ್ವದ ಪ್ರಮುಖ ಜವಳಿ ರಫ್ತುದಾರ ರಾಷ್ಟ್ರಗಳಾಗಿ ಗುರುತಿಸಿಕೊಂಡಿದ್ದು, ಈಗ ಭಾರತ ಸಹ ಈ ಸಾಲಿಗೆ ಸೇರುತ್ತಿದೆ. ಪ್ರಮುಖ ರಾಷ್ಟ್ರಗಳೊಂದಿಗೆ ಪೈಪೋಟಿವೊಡ್ಡಿದೆ.
ಕೇಂದ್ರ ಸರ್ಕಾರದಿಂದ ಸ್ವದೇಶಿ ಉತ್ಪಾದನೆಗೆ ಬಲ, ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ನೈಜ ಪ್ರೋತ್ಸಾಹ ಮತ್ತು ಜವಳಿ ಪೂರಕ ಕೃಷಿ ಉತ್ತೇಜನ ಯೋಜನೆಗಳು ಭಾರತದ ಜವಳಿ ಕ್ಷೇತ್ರಕ್ಕೆ ಹೊಸ ತಿರುವು ನೀಡಿದ್ದರೆ, ಪಿಎಲ್ಐ ಯೋಜನೆ ಉದ್ಯಮಕ್ಕೊಂದು ನವಚೈತನ್ಯ ತುಂಬಿದೆ.
*ಕೈಮಗ್ಗದಿಂದ ಕೈಗಾರಿಕೆವರೆಗೆ ಬೆಳವಣಿಗೆ:* ಭಾರತದ ಜವಳಿ ಕ್ಷೇತ್ರ ದಶಕದಿಂದೀಚೆಗೆ ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ. ಹತ್ತಿ ಆಧಾರಿತ ಹಾಸು, ಹೊದಿಕೆ ಉತ್ಪನ್ನಗಳ ಕೈಗಾರಿಕೆಯಿಂದ ಹಿಡಿದು ತಾಂತ್ರಿಕ ವಸ್ತ್ರಗಳ ತಯಾರಿಕೆವರೆಗೆ, ಕೈಮಗ್ಗದಿಂದ ಕಾರ್ಖಾನೆಗಳವರೆಗೆ ಜವಳಿ ಉದ್ಯಮ ವಿಸ್ತರಿಸಿದೆ.
*ಜವಳಿ ಕ್ಷೇತ್ರಕ್ಕೆ ಶಕ್ತಿ ತುಂಬಿದ ಪಿಎಲ್ಐ ಯೋಜನೆ:* ಒಂದು ಕಾಲದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅಗತ್ಯ ತಂತ್ರಜ್ಞಾನ, ಗುಣಮಟ್ಟದಿಂದಾಗಿ ಸ್ವಲ್ಪ ಹಿನ್ನಡೆಗೆ ಒಳಗಾಗಿದ್ದ ಭಾರತದ ಜವಳಿ ಕ್ಷೇತ್ರಕ್ಕೆ ಜೋಳದ ರೊಟ್ಟಿಯಷ್ಟೇ ಶಕ್ತಿ ತುಂಬಿದ್ದು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿದ ಪಿಎಲ್ಐ ಯೋಜನೆ.
ʼಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆʼ ಪಿಎಲ್ಐ ಇದೀಗ ಭಾರತದ ಜವಳಿ ಉದ್ಯಮವನ್ನು ವಿಸ್ತ್ರ ವಿನ್ಯಾಸದಷ್ಟೇ ಸೊಬಗುಗೊಳಿಸಿದೆ. 2030ರ ಮಾರ್ಚ್ 31ರವರೆಗೆ ಗಡಿರೇಖೆ ಹಾಕೊಕೊಂಡಿರುವಪಿಎಲ್ಐ ಯೋಜನೆ ಮ್ಯಾನ್‌ಮೇಡ್ ಫೈಬರ್ ಆಧಾರಿತ ಉಡುಪುಗಳು ಮತ್ತು ತಾಂತ್ರಿಕ ವಸ್ತ್ರಗಳ ಉತ್ಪಾದನೆಗೆ ನೇರ ಹಣಕಾಸು ಪ್ರೋತ್ಸಾಹ ನೀಡುತ್ತದೆ.
ಸರ್ಕಾರದ ಯೋಜನೆ ಮತ್ತು ಅಗತ್ಯ ಬೆಂಬಲದಿಂದಾಗಿ ಭಾರತದ ಜವಳಿ ಉತ್ಪಾದಕರು ಹತ್ತಿ ಉತ್ಪನ್ನಗಳ ಹೊರತಾಗಿ ಆಧುನಿಕ ವಸ್ತ್ರಗಳ ತಯಾರಿಕೆಯಲ್ಲೂ ಪರಿವರ್ತನೆ ಹೊಂದಿದ್ದಾರೆ. ಇದು ದೇಶೀಯ ಉತ್ಪಾದಕರಿಗೆ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶಿಸಿ ಉದ್ಯಮ ವಿಸ್ತರಿಸಿಕೊಳ್ಳುವಲ್ಲಿ ನೆರವಾಗಿದೆ.
ಪರಿಣಾಮಕಾರಿ ಕ್ರಮಗಳ ಪ್ರತಿಫಲ:ಪಿಎಲ್ಐ ಯೋಜನೆ ಯಶಸ್ಸಿಗೆ ಬುನಾದಿ ಹಾಕಲು ಜವಳಿ ಸಚಿವಾಲಯ ಹತ್ತು ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ತಾಂತ್ರಿಕ ವಸ್ತ್ರಗಳ ವ್ಯಾಪ್ತಿಯನ್ನು ವಿಸ್ತರಿಸಲು ಹೆಚ್ಚುವರಿ HS ಕೋಡ್‌ಗಳನ್ನು ಪರಿಚಯಿಸಿದೆ. 2025ರ ಫೆಬ್ರವರಿಯಲ್ಲಿ ಮೊಟ್ಟಮೊದಲು ಎನ್ನುವಂತೆ ₹54 ಕೋಟಿ ಮೊತ್ತದ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಿದ್ದು, ಕೈಗಾರಿಕೆಗೆ ಭದ್ರತೆ-ತ್ವರಿತ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ.
ʼಹೂಡಿಕೆದಾರರ ಬದ್ಧತೆ ಹಾಗೂ ಪರಿಣಾಮದ ಆಧಾರದ ಮೇಲೆ ಪ್ರೋತ್ಸಾಹ'ವಾಗಿ ಮೊದಲ ಹಂತದಲ್ಲಿ ₹100 ಕೋಟಿ ಮತ್ತು ಎರಡನೇ ಹಂತದಲ್ಲಿ ₹300 ಕೋಟಿ ಹೂಡಿಕೆಗೆ ನಿಗದಿಪಡಿಸಿದ್ದು, ಪ್ರತಿ ವರ್ಷ ಶೇ.25ರಷ್ಟು ವ್ಯಾಪಾರ ವೃದ್ಧಿಯ ಗುರಿ ತಲುಪಿದಾಗ ಮಾತ್ರ ಈ ಪ್ರೋತ್ಸಾಹಧನ ಮಂಜೂರಾಗುತ್ತದೆ. ಇದು ಹೂಡಿಕೆದಾರರಿಗೆ ಉತ್ತೇಜನ ನೀಡುವ ಜತೆಗೆ ಆರ್ಥಿಕ ಸಬಲತೆಯ ದಿಕ್ಕು ತೋರುತ್ತಿದೆ.
*₹10,683 ಕೋಟಿ ಬಜೆಟ್ ಮೀಸಲು:* ಕೇಂದ್ರ ಸರ್ಕಾರ 2025ರಿಂದ 2030ರವರೆಗಿನ ಐದು ಹಣಕಾಸು ವರ್ಷಗಳವರೆಗೆ ₹10,683 ಕೋಟಿ ಬಜೆಟ್ ಮೀಸಲಿರಿಸಿ ಪಿಎಲ್ಐ ಯೋಜನೆ ಮೂಲಕ ಜವಳಿ ಕ್ಷೆತ್ರಕ್ಕೆ ಹೊಸ ರೂಪ ಕೊಟ್ಟಿದೆ. ಈಗಾಗಲೇ ಇದರಡಿ ₹7,343 ಕೋಟಿ ಹೂಡಿಕೆ, ₹4,648 ಕೋಟಿ ವ್ಯವಹಾರ ವಹಿವಾಟು ಹಾಗೂ ₹538 ಕೋಟಿ ಮೌಲ್ಯದ ರಫ್ತುಗಳು ದಾಖಲಾಗಿದೆ. ಇದು ಯೋಜನೆಯ ಕಾರ್ಯಕ್ಷಮತೆ, ಸಾರ್ಥಕತೆಯನ್ನು ಪ್ರತಿಬಿಂಬಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಈ ಪಿಎಲ್ಐ ಯೋಜನೆಯಿಂದ ದೇಶೀಯ ಕೈಗಾರಿಕೆಗೆ ಅಭಿವೃದ್ಧಿಯ ಹೊಸ ದಿಕ್ಕು ಸಿಕ್ಕಿದಂತಾಗಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ್’ ದೃಷ್ಟಿಕೋನಕ್ಕೂ ಇದು ಪೂರಕವಾಗಿದೆ.
ತಾಂತ್ರಿಕ ವಸ್ತ್ರಗಳಿಗೆ ಹೆಚ್ಚು ಒತ್ತು:ಪಿಎಲ್ಐ ಯೋಜನೆಯ ಪ್ರಮುಖ ಭಾಗವೆಂದರೆ ತಾಂತ್ರಿಕ ಜವಳಿಗಳಿಗೆ ಪ್ರೋತ್ಸಾಹ. ಈ ವಲಯದಲ್ಲಿ ಆಯ್ಕೆಯಾದ 74 ಅರ್ಜಿಗಳಲ್ಲಿ ಶೇ.56.75 ಅರ್ಜಿಗಳು ತಾಂತ್ರಿಕ ಜವಳಿಗಳಿಗೆ ಸಂಬಂಧಿಸಿವೆ. ಗಾಜಿನ ನಾರು, ಕಾರ್ಬನ್ ಫೈಬರ್, ಆಟೋ ಸುರಕ್ಷತಾ ಸಾಧನೆಗೆ ಬಳಸುವ ವಸ್ತುಗಳು ಇದೀಗ ದೇಶದಲ್ಲಿಯೇ ಉತ್ಪಾದನೆಗೊಳ್ಳುತ್ತಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.
*ಹೂಡಿಕೆಗೆ ವಿದೇಶಿಗರ ವಿಶೇಷ ಆಸಕ್ತಿ:* ಭಾರತದ ಜವಳಿ ಕ್ಷೇತ್ರದ ಅಭಿವೃದ್ಧಿ ಮತ್ತು ತಂತ್ರಜ್ಞಾನ ಆಧಾರಿತ ಪ್ರೋತ್ಸಾಹ, ಉತ್ತೇಜನ ಕಂಡು ವಿದೇಶಿ ಹೂಡಿಕೆದಾರರು ಸಹ ಈಗ ಭಾರತದತ್ತ ಮುಖ ಮಾಡಿದ್ದಾರೆ. ಪಾಶ್ಚಾತ್ಯ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದಾಗುತ್ತಿದ್ದು, ನಮ್ಮ ಜವಳಿ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಯ ಸೂಚಕವಾಗಿದೆ. ಕಡಿಮೆ ವೆಚ್ಚದ ಕಾರ್ಮಿಕ ಶಕ್ತಿ ಹಾಗೂ ದಕ್ಷತೆ ಜತೆಗೆ ತಂತ್ರಜ್ಞಾನದ ಅಳವಡಿಕೆ ದೇಶವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಸ್ಥಾಪಿಸುತ್ತಿದೆ.
ಒಟ್ಟಾರೆ ಹೇಳುವುದಾದರೆ ನಮ್ಮ ಪಿಎಲ್ಐ ಯೋಜನೆ ಕೇವಲ ಆರ್ಥಿಕ ಪ್ರೋತ್ಸಾಹ ಮಾತ್ರವಲ್ಲ, ಕೈಗಾರಿಕೆಗಳಿಗೆ ಭವಿಷ್ಯದ ಭರವಸೆ-ಹೊಸ ದೃಷ್ಟಿಕೋನವಾಗಿದೆ. ಮುಂದಿನ ಹಂತಗಳಲ್ಲಿ ಇನ್ನಷ್ಟು ಸಂಶೋಧನಾ ಸಹಕಾರ, ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳೊಂದಿಗೆ ತಂತ್ರಜ್ಞಾನ ಹಂಚಿಕೆ ಮತ್ತು ಲಾಜಿಸ್ಟಿಕ್ಸ್ ಸುಧಾರಣೆಯೊಂದಿಗೆ ಭಾರತವನ್ನು ವಿಶ್ವದ ʼಟೆಕ್ಸ್‌ಟೈಲ್ ಹಬ್ʼ ಆಗಿ ರೂಪುಗೊಳಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa