ಬೆಂಗಳೂರು, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಾಳೆ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಮೈಸೂರು ಹಾಗೂ ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೈಸೂರಿನ ಸುತ್ತೂರು ಮಠದಲ್ಲಿ ನಡೆಯುವ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಅವರು ಸಸಿ ನೆಟ್ಟು ,ಭಕ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.
ನಂತರ ಬೆಂಗಳೂರಿಗೆ ಆಗಮಿಸುವ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಹಲವು ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ. ಮೊದಲು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋಗೆ ತೆರಳಿ, ಕೀಟ ವಸ್ತುಸಂಗ್ರಹಾಲಯ ವೀಕ್ಷಣೆ, ಜೀವಂತ ಕೀಟ ಭಂಡಾರ ಪರಿಶೀಲನೆ ಹಾಗೂ ಜೈವಿಕ ಕೀಟ ನಿಯಂತ್ರಣ ತಂತ್ರಜ್ಞಾನಗಳ ಪ್ರದರ್ಶನ ವೀಕ್ಷಿಸುವರು.
ರಾಷ್ಟ್ರೀಯ ಪಶುವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆಗೆ ಭೇಟಿ ನೀಡಿ, ಪ್ರಾಣಿ ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮಗಳು, ರೋಗ ಮುನ್ಸೂಚನೆ ವ್ಯವಸ್ಥೆ ಹಾಗೂ “ಒನ್ ಹೆಲ್ತ್” ಚಟುವಟಿಕೆಗಳ ಪ್ರಗತಿ ಕುರಿತು ಪರಿಶೀಲನೆ ನಡೆಸಲಿದ್ದಾರೆ.
ಇದೇ ವೇಳೆ ಜಾನುವಾರು ರೈತರ ಕಾರ್ಯಾಗಾರದಲ್ಲಿ ಸಚಿವರು ಮಾತನಾಡಲಿದ್ದು, ತಂತ್ರಜ್ಞಾನಗಳಿಂದ ಲಾಭ ಪಡೆದ ಯಶಸ್ವಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಇದಲ್ಲದೆ, ಬೆಂಗಳೂರಿನ ಇತರ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸಂಸ್ಥೆಗಳ ನಿರ್ದೇಶಕರೊಂದಿಗೆ ಸಭೆ ನಡೆಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa