ಪಾಟ್ನಾ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಹಕ್ಕುಗಳ ಯಾತ್ರೆ ಬುಧವಾರ ದರ್ಭಂಗಾದಿಂದ ಮುಜಫರ್‌ಪುರ ತಲುಪಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜಿಡಿ ನಾಯಕ ತೇಜಸ್ವಿ ಯಾದವ್ ನೇತೃತ್ವದ ಈ ಯಾತ್ರೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಭಾಗವಹಿಸಿದರು.
ಮುಜಫರ್‌ಪುರದ ಜರಂಗ್ ಪ್ರೌಢಶಾಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ, ಚುನಾವಣಾ ಆಯೋಗ ಮತ್ತು ಬಿಜೆಪಿ ಮತ ಕಳ್ಳತನ ಮಾಡಿದೆ ಎಂದು ಆರೋಪಿಸಿದರು. ಹರಿಯಾಣ, ಮಹಾರಾಷ್ಟ್ರ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿಯೂ ಮತಗಳನ್ನು ಕದ್ದಿದ್ದಾರೆ ಎಂದು ಅವರು ಹೇಳಿದರು. “ಒಬ್ಬ ವ್ಯಕ್ತಿಗೆ ಒಂದು ಮತ ಎನ್ನುವ ಸಂವಿಧಾನಾತ್ಮಕ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಬಿಹಾರದಲ್ಲಿ 65 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಲ್ಲಿ ದಲಿತರು, ಹಿಂದುಳಿದವರು, ಅತಿ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಹೆಚ್ಚಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, “ಬಿಹಾರ ಎಂದರೆ ಲಾಲು ಯಾದವ್ ನೆನಪಾಗುತ್ತಾರೆ. ಅವರು ಬಿಜೆಪಿಗೆ ಹೆದರದೆ ಹೋರಾಡಿದ ಮಹಾನಾಯಕ. ಅವರ ಮಗ ತೇಜಸ್ವಿ ಯಾದವ್ ಅವರ ಹೆಜ್ಜೆಗುರುತುಗಳಲ್ಲಿ ಹೋರಾಟ ಮುಂದುವರಿಸುತ್ತಿದ್ದಾರೆ. ಇಡೀ ಭಾರತ ಇಂದು ಬಿಹಾರದತ್ತ ನೋಡುತ್ತಿದೆ. ಇದು ಬಿಹಾರದ ಶಕ್ತಿ, ರಾಹುಲ್ ಗಾಂಧಿಯವರ ಶಕ್ತಿ. ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಯಾವಾಗ ಬೆದರಿಕೆ ಬಂದರೂ ಬಿಹಾರದಿಂದಲೇ ಪ್ರತಿರೋಧ ಎದ್ದಿದೆ,” ಎಂದು ಹೇಳಿದರು.
ಚುನಾವಣಾ ಆಯೋಗವನ್ನು ಬಿಜೆಪಿ ರಿಮೋಟ್ ಕಂಟ್ರೋಲ್‌ನ ಕೈಗೊಂಬೆಯನ್ನಾಗಿ ಮಾಡಿದೆ. 65 ಲಕ್ಷ ಮತದಾರರ ಹೆಸರುಗಳನ್ನು ಅಳಿಸುವುದು ಪ್ರಜಾಪ್ರಭುತ್ವದ ಕೊಲೆ ಎಂದು ಸ್ಟಾಲಿನ್ ತೀವ್ರವಾಗಿ ಟೀಕಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa