ನವದೆಹಲಿ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಭಾರತದ ಮೇಲೆ ವಿಧಿಸಿರುವ 50% ಸುಂಕದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಖರ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದು, “ಅಬ್ಕಿ ಬಾರ್, ಟ್ರಂಪ್ ಸರ್ಕಾರ್” ಎಂದು ನಿಮ್ಮ ಸ್ನೇಹಿತನಂತೆ ಬಿಂಬಿಸಿಕೊಂಡಿದ್ದರೂ, ಈಗ ಭಾರತಕ್ಕೆ ಭಾರಿ ಆರ್ಥಿಕ ಹೊಡೆತ ಬಂದಿದೆ. ಈ ಸುಂಕದ ಪರಿಣಾಮದಿಂದ ಕೇವಲ 10 ವಲಯಗಳಲ್ಲಿ ಮಾತ್ರವೇ ₹2.17 ಲಕ್ಷ ಕೋಟಿ ನಷ್ಟ ಸಂಭವಿಸುವ ಅಂದಾಜಿದೆ ಎಂದು ಹೇಳಿದ್ದಾರೆ.
ಅವರು ರೈತರ ಸಂಕಷ್ಟದ ಬಗ್ಗೆ ಉಲ್ಲೇಖಿಸಿ, ಹತ್ತಿ ರೈತರು ತೀವ್ರ ಹಾನಿಗೊಳಗಾಗಿದ್ದಾರೆ. ಅವರನ್ನು ರಕ್ಷಿಸಲು ನೀವು ವೈಯಕ್ತಿಕ ಬೆಲೆ ಪಾವತಿಸಲು ಸಿದ್ಧ ಎಂದಿದ್ದೀರಿ. ಆದರೆ ವಾಸ್ತವದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮದ ಪ್ರಕಾರ, ಈ ಸುಂಕವು ಭಾರತದ ಜಿಡಿಪಿಯ 1% ಮೇಲೆ ಹೊಡೆತ ಬೀರುತ್ತದೆ. ಆದರೆ ಚೀನಾ ಇದರ ಲಾಭ ಪಡೆಯುವ ಸಾಧ್ಯತೆ ಇದೆ.
ಜವಳಿ ರಫ್ತು ವಲಯದಲ್ಲಿ ಸುಮಾರು 5 ಲಕ್ಷ ಉದ್ಯೋಗಗಳು ಅಪಾಯದಲ್ಲಿವೆ. ರತ್ನ ಮತ್ತು ಆಭರಣ ವಲಯದಲ್ಲಿ 1.5 ರಿಂದ 2 ಲಕ್ಷ ಉದ್ಯೋಗಗಳು ಕಳೆದುಹೋಗುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿ ಜಾರಿಗೆ ಬಂದ 10% ಯುಎಸ್ ಸುಂಕದ ನಂತರ, ಸೌರಾಷ್ಟ್ರದ 1 ಲಕ್ಷ ವಜ್ರ ಕಾರ್ಮಿಕರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಅರ್ಧ ಮಿಲಿಯನ್ ರೈತರ ನೇರ ಹಾಗೂ 2.5 ಮಿಲಿಯನ್ ಜನರ ಪರೋಕ್ಷ ಜೀವನೋಪಾಯ ಅಪಾಯದಲ್ಲಿದೆ ಎಂದಿದ್ದಾರೆ.
ಭಾರತೀಯ ರಾಷ್ಟ್ರೀಯ ಹಿತಾಸಕ್ತಿ ಸರ್ವೋಚ್ಚ. ಬಲಿಷ್ಠ ವಿದೇಶಾಂಗ ನೀತಿಗೆ ಸತ್ವ ಮತ್ತು ಚತುರತೆ ಬೇಕು. ಆದರೆ ನಿಮ್ಮ ಮೇಲ್ನೋಟದ ವಿದೇಶಾಂಗ ತೊಡಗಿಸಿಕೊಳ್ಳುವಿಕೆ – ನಗು, ಅಪ್ಪುಗೆ ಮತ್ತು ಸೆಲ್ಫಿಗಳು ದೇಶದ ಹಿತಾಸಕ್ತಿಗಳಿಗೆ ಹಾನಿ ಮಾಡಿವೆ. ನೀವು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ವಿಫಲರಾಗಿದ್ದೀರಿ, ಈಗ ದೇಶವನ್ನು ರಕ್ಷಿಸುವಲ್ಲಿಯೂ ವಿಫಲರಾಗಿದ್ದೀರಿ ಎಂದು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa