ನವದೆಹಲಿ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪಹಲ್ಗಾಮ್ ದಾಳಿಯ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದ ಆಪರೇಷನ್ ಮಹಾದೇವ್ ಯಶಸ್ವಿ ಸೈನಿಕರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಭೇಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಜನರ ಪರವಾಗಿ ಈ ಗೌರವವನ್ನು ಭದ್ರತಾ ಪಡೆಗಳಿಗೆ ನೀಡುತ್ತಿದ್ದೇವೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ನಡೆದ ದಾಳಿಯನ್ನು ವಿಫಲಗೊಳಿಸುವ ಮೂಲಕ ಸೈನಿಕರು ದೇಶದ ಜನರ ಭದ್ರತಾ ನಂಬಿಕೆಯನ್ನು ಬಲಪಡಿಸಿದ್ದಾರೆ ಎಂದರು.
ಆಪರೇಷನ್ ಸಿಂಧೂರ್ ಜನರಲ್ಲಿ ತೃಪ್ತಿಯನ್ನು ಮೂಡಿಸಿದರೆ, ಆಪರೇಷನ್ ಮಹಾದೇವ್ ಅದನ್ನು ಆತ್ಮವಿಶ್ವಾಸವಾಗಿ ಪರಿವರ್ತಿಸಿದೆ. ಈ ಕಾರ್ಯಾಚರಣೆಗಳು ಭಾರತಕ್ಕೆ ಹಾನಿ ಮಾಡುವವರ ವಿರುದ್ಧ ಬಲವಾದ ಸಂದೇಶ ನೀಡಿವೆ ಎಂದು ಹೇಳಿದರು.
ಎನ್‌ಐಎ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ, ಆಪರೇಷನ್ ಮಹಾದೇವ್‌ನಲ್ಲಿ ಹತವಾದ ಭಯೋತ್ಪಾದಕರೇ ಪಹಲ್ಗಾಮ್‌ನಲ್ಲಿ ಅಮಾಯಕ ಜನರ ಮೇಲೆ ಕ್ರೌರ್ಯ ಎಸಗಿದವರು ಎಂದು ಸಾಬೀತಾಗಿದೆ.
ಜುಲೈ 28ರಂದು ಸೇನೆ, ಸಿಆರ್‌ಪಿಎಫ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ನಿಖರ ಗುಪ್ತಚರ ಮಾಹಿತಿ ಆಧಾರದ ಮೇಲೆ ಹಲವಾರು ಗಂಟೆಗಳ ಎನ್‌ಕೌಂಟರ್ ನಡೆಸಿ ಲಷ್ಕರ್ ಭಯೋತ್ಪಾದಕರಾದ ಸುಲೇಮಾನ್, ಅಫ್ಘಾನ್ ಹಾಗೂ ಜಿಬ್ರಾನ್ ಅವರನ್ನು ಹೊಡೆದುರುಳಿಸಿದರು. ಇದರೊಂದಿಗೆ ದಾಳಿಯ ಮಾಸ್ಟರ್‌ಮೈಂಡ್ ಹಾಗೂ ಸಹಚರರನ್ನು ತಟಸ್ಥಗೊಳಿಸಲಾಯಿತು ಎಂದು ಹೇಳಿದರು.
ಭಯೋತ್ಪಾದಕರು ಎಷ್ಟು ಬಾರಿ ತಂತ್ರ ಬದಲಿಸಿದರೂ, ಭಾರತದ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಸಾಬೀತಾಗಿದೆ. ಈಗ ಜಮ್ಮು-ಕಾಶ್ಮೀರ ಪೊಲೀಸರು ಕೂಡ ಈ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದು, ಈ ಯಶಸ್ಸಿನಿಂದ ಕಣಿವೆಯಲ್ಲಿ ಶಾಂತಿಯ ಭಾವನೆ ಬಲಗೊಂಡಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಭದ್ರತೆಯ ವಿಶ್ವಾಸ ಹೆಚ್ಚಾಗಿದೆ ಎಂದು ಅಮಿತ್ ಶಾ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa