ನವದೆಹಲಿ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಭಾರತ ಆಯೋಜಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ನಡೆಸಲು ಬಿಡ್ ಸಲ್ಲಿಸಲು ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪ್ರಸ್ತಾವನೆ ಅಂಗೀಕರಿಸಲಾಯಿತು. ಅಗತ್ಯ ಖಾತರಿಗಳೊಂದಿಗೆ ಆತಿಥೇಯ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವುದು ಹಾಗೂ ಬಿಡ್ ಅಂಗೀಕಾರವಾದರೆ ಗುಜರಾತ್ ಸರ್ಕಾರಕ್ಕೆ ಬೇಕಾದ ಅನುದಾನ ಒದಗಿಸಲು ಸಹ ಕೇಂದ್ರ ಒಪ್ಪಿಗೆ ಸೂಚಿಸಿದೆ.
ಈ ಕುರಿತು ಪ್ರಕಟಣೆಯ ಬಿಡುಗಡೆ ಮಾಡಿರುವ ಕೇಂದ್ರ ಸರಕಾರ, ಅಹಮದಾಬಾದ್ ಆತಿಥೇಯ ನಗರವಾಗಿ ಸೂಕ್ತವಾಗಿದೆ. ವಿಶ್ವದ ಅತಿದೊಡ್ಡ ನರೇಂದ್ರ ಮೋದಿ ಕ್ರೀಡಾಂಗಣ ಈಗಾಗಲೇ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಯಶಸ್ವಿಯಾಗಿ ಆಯೋಜಿಸಿ ತನ್ನ ಸಾಮರ್ಥ್ಯ ತೋರಿದೆ. ಅಲ್ಲದೇ ಅತ್ಯಾಧುನಿಕ ತರಬೇತಿ ಸೌಲಭ್ಯಗಳು ಮತ್ತು ಕ್ರೀಡಾಸಂಸ್ಕೃತಿ ಅಹಮದಾಬಾದ್‌ಗೆ ಪೂರಕವಾಗಿವೆ.
ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆಯಿಂದ ದೇಶದಲ್ಲಿ ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಭಾವನೆ ಬಲವಾಗುವುದರ ಜೊತೆಗೆ ಹೊಸ ಪೀಳಿಗೆಯ ಕ್ರೀಡಾಪಟುಗಳು ಕ್ರೀಡೆಯನ್ನು ವೃತ್ತಿಯಾಗಿ ಆರಿಸಲು ಪ್ರೇರೇಪಣೆ ದೊರೆಯಲಿದೆ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಈ ಕ್ರೀಡಾಕೂಟದಲ್ಲಿ 72 ದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದು, ಸಾವಿರಾರು ಕ್ರೀಡಾಪಟುಗಳು, ತರಬೇತುದಾರರು, ತಾಂತ್ರಿಕ ಅಧಿಕಾರಿಗಳು, ಪ್ರವಾಸಿಗರು, ಮಾಧ್ಯಮ ಪ್ರತಿನಿಧಿಗಳು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದು ಸ್ಥಳೀಯ ವ್ಯಾಪಾರಗಳಿಗೆ ಉತ್ತೇಜನ ನೀಡುವುದರೊಂದಿಗೆ ಆರ್ಥಿಕತೆಗೆ ಹೆಚ್ಚಿನ ಆದಾಯ ತರಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa