ಸಂಪೂರ್ಣ ಹಿಂದೂ ಸಮಾಜದ ಸಂಘಟನೆ ಸಂಘದ ಧ್ಯೇಯ : ಆರ್ ಎಸ್ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್
ಭಾರತವನ್ನು ವಿಶ್ವಗುರುವನ್ನಾಗಿಸಲು ಸಂಘದ ಸಂಘಟಿತ ಪ್ರಯತ್ನ;ರಾಜಕೀಯ ಲಾಭಕ್ಕಾಗಿ ಅಲ್ಲ;ಡಾ.ಮೋಹನ್ ಭಾಗವತ್
Rss


ನವದೆಹಲಿ, 26 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಂಘ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಮೂರು ದಿನಗಳ ಉಪನ್ಯಾಸ ಮಾಲಿಕೆಯ ಮೊದಲ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಮಾತನಾಡಿ, ಸಂಘದ ನಿರ್ಮಾಣ ಭಾರತವನ್ನು ಕೇಂದ್ರದಲ್ಲಿ ಇಟ್ಟುಕೊಂಡು ನಡೆದಿದೆ. ಅದರ ನಿಜವಾದ ಸಾರಾಂಶ ಭಾರತವು ವಿಶ್ವಗುರುವಾಗುವುದರಲ್ಲಿ ಅಡಗಿದೆ.” ಸಂಘ ಕಾರ್ಯಕ್ಕೆ ಪ್ರೇರಣೆ ಸಂಘ ಪ್ರಾರ್ಥನೆಯ ಅಂತ್ಯದಲ್ಲಿ ಘೋಷಿಸುವ “ಭಾರತ ಮಾತಾ ಕೀ ಜಯ” ಎಂಬ ಘೋಷದಿಂದ ದೊರೆಯುತ್ತದೆ. ಸಂಘದ ಏರಿಕೆ ನಿಧಾನವಾದರೂ ನಿರಂತರವಾಗಿದೆ ಎಂದರು.

100 ವರ್ಷಗಳ ಸಂಘಯಾತ್ರೆಯ ಹೊಸ ದಿಕ್ಕುಗಳು ಎಂಬ ಘೋಷವಾಕ್ಯದ ಅಡಿ ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘ ಹಿಂದೂ ಎಂಬ ಪದವನ್ನು ಬಳಕೆ ಮಾಡುತ್ತದೆ, ಆದರೆ ಅದರ ಮರ್ಮ “ವಸುದೈವ ಕುಟುಂಬಕಂ”. ಹಳ್ಳಿಯಿಂದ ಸಮಾಜದವರೆಗೆ, ಸಮಾಜದಿಂದ ರಾಷ್ಟ್ರದವರೆಗೆ ಎಲ್ಲವನ್ನೂ ಸಂಘ ತನ್ನದಾಗಿ ಪರಿಗಣಿಸುತ್ತದೆ. ಸಂಘ ಕಾರ್ಯ ಸಂಪೂರ್ಣವಾಗಿ ಸ್ವಯಂಸೇವಕರಿಂದಲೇ ನಡೆಯುತ್ತದೆ. ಕಾರ್ಯಕರ್ತರೇ ಹೊಸ ಕಾರ್ಯಕರ್ತರನ್ನು ರೂಪಿಸುತ್ತಾರೆ ಎಂದು ಹೇಳಿದರು.

ರಾಷ್ಟ್ರ ಎಂಬ ಪರಿಕಲ್ಪನೆ ಅಧಿಕಾರಾಧಾರಿತವಲ್ಲ. ನಾವು ಪರತಂತ್ರರಾಗಿದ್ದಾಗಲೂ ರಾಷ್ಟ್ರ ಇತ್ತು. ಇಂಗ್ಲಿಷಿನ ರಾಷ್ಟ್ರ ಎಂಬುದು ರಾಜ್ಯಕ್ಕೆ ಸಂಬಂಧಿಸಿದೆ. ಆದರೆ ಭಾರತೀಯ ರಾಷ್ಟ್ರ ಪರಿಕಲ್ಪನೆಗೆ ರಾಜಕೀಯ ಅಧಿಕಾರದ ಸಂಬಂಧವಿಲ್ಲ ಎಂದು ಡಾ.ಮೋಹನ್ ಭಾಗವತ್ ಹೇಳಿದರು.

1857ರ ಸ್ವಾತಂತ್ರ್ಯದ ಮೊದಲ ಯತ್ನ ವಿಫಲವಾದರೂ ಹೊಸ ಚೇತನ ಮೂಡಿಸಿತು. ನಂತರ ಕೆಲವರು “ಸ್ವಲ್ಪ ಮಂದಿ ಇಂಗ್ಲೀಷರು ನಮ್ಮನ್ನು ಹೇಗೆ ಜಯ ಸಾಧಿಸಿದರು?” ಎಂಬ ಪ್ರಶ್ನೆ ಎತ್ತಿದರು ಈ ಹಿನ್ನೆಲೆಯಲ್ಲಿ ರಾಜಕೀಯ ಅರಿವು ಇಲ್ಲವೆಂಬ ತೀರ್ಮಾನದಿಂದ ಕಾಂಗ್ರೆಸ್ ಹುಟ್ಟಿತು. ಆದರೆ ಸ್ವಾತಂತ್ರ್ಯದ ನಂತರ ಅದು ಸರಿಯಾಗಿ ಬೌದ್ಧಿಕ ಪ್ರಬೋಧನ ಮಾಡಲು ವಿಫಲವಾಯಿತು ಎಂದರು.

ಸ್ವಾತಂತ್ರ್ಯದ ನಂತರ ಕೆಲವೊಂದು ಧಾರೆಗಳು ಸಮಾಜದ ಕುರುಹುಗಳನ್ನು ದೂರ ಮಾಡಲು ಒತ್ತಾಯಿಸಿದರೆ, ಮತ್ತೊಂದು ಧಾರೆ ತನ್ನ ಮೂಲಗಳ ಕಡೆಗೆ ಮರಳಬೇಕೆಂದು ಬೋಧಿಸಿತು. ಸ್ವಾಮಿ ದಯಾನಂದ ಸರಸ್ವತಿ ಮತ್ತು ಸ್ವಾಮಿ ವಿವೇಕಾನಂದರು ಈ ಚಿಂತನೆ ಮುಂದುವರಿಸಿದರು.

ಡಾ. ಕೇಶವ ಬಲಿರಾಮ ಹೆಡ್ಗೆವಾರ್ ಅವರ ಅಭಿಪ್ರಾಯದ ಪ್ರಕಾರ, ಸಮಾಜದ ದುರ್ಗುಣಗಳನ್ನು ಹೋಗಲಾಡಿಸದೆ ಎಲ್ಲಾ ಪ್ರಯತ್ನವೂ ಅಪೂರ್ಣ. ಗುಲಾಮಗಿರಿಯು ಪದೇಪದೇ ಬರಲು ಸಮಾಜದ ಒಳಗಿನ ದೋಷಗಳೇ ಕಾರಣ ಎಂಬುದು ಅವರ ನಿರ್ಣಯ. ಆದ್ದರಿಂದ 1925ರಲ್ಲಿ ಸಂಘವನ್ನು ಸ್ಥಾಪಿಸಿ ಸಂಪೂರ್ಣ ಹಿಂದೂ ಸಮಾಜದ ಸಂಘಟನೆ ಗುರಿಯಾಯಿತು ಎಂದು ಡಾ‌.ಭಾಗವತ್ ಹೇಳಿದರು.

ಹಿಂದೂ ಪದವು ಕೇವಲ ಧಾರ್ಮಿಕವಲ್ಲ, ರಾಷ್ಟ್ರದ ಹೊಣೆಗಾರಿಕೆಯ ಸಂಕೇತ. ಹಿಂದೂ ಎಂದರೆ ಸಮಾವೇಶ, ಅದಕ್ಕೆ ಮಿತಿ ಇಲ್ಲ. ಹಿಂದೂ ಎಂದರೆ ನಿನ್ನ ಮಾರ್ಗದಲ್ಲಿ ನೀನು ನಡೆಯುವದು ಮತ್ತು ಇತರರ ಭಕ್ತಿ-ಶ್ರದ್ಧೆಗೆ ಗೌರವ ಕೊಡುವುದು, ಅನ್ಯರಿಗೆ ಅವಮಾನ ಮಾಡದೆ, ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವವರು ಹಿಂದೂಗಳು ಎಂದು ಡಾ.ಭಾಗವತ್ ಹೇಳಿದರು.

ಹಿಂದೂ ಪದದ ಕುರಿತು ಸ್ಪಷ್ಟಪಡಿಸಿದ ಡಾ.ಮೋಹನ್ ಭಾಗವತ್ ಹಿಂದೂ ಎಂದು ಹೇಳುವುದು ಅನ್ಯರ ವಿರುದ್ದ ಅಲ್ಲ ಹಿಂದೂ ಎಂಬುದು ಎಲ್ಲರನ್ನು ಒಳಗೊಂಡಿರುವ ಸಂಕೇತವಾಗಿದೆ ಎಂದರು.

ಭಾರತದ ಸ್ವಭಾವ ಸಮನ್ವಯದಿಂದ ಕೂಡಿದೆ, ಸಂಘರ್ಷದಿಂದಲ್ಲ, ಭಾರತದ ಏಕತೆಯ ರಹಸ್ಯ ಅದರ ಭೂಗೋಳ, ಸಂಪತ್ತು ಮತ್ತು ಆತ್ಮಚಿಂತನೆಗಳ ಪರಂಪರೆಯಲ್ಲಿ ಅಡಗಿದೆ. “ಭಾರತ ಮಾತೆ ಮತ್ತು ಪೂರ್ವಜರನ್ನೇ ಆರಾಧಿಸುವವನೇ ನಿಜವಾದ ಹಿಂದೂ, ಕೆಲವರು ತಮ್ಮನ್ನು ಹಿಂದೂ ಎಂದು ಕರೆಯುತ್ತಾರೆ, ಕೆಲವರು ಭಾರತೀಯ ಅಥವಾ ಸನಾತನಿ ಎನ್ನುತ್ತಾರೆ. ಪದ ಬದಲಾದರೂ ಅದರ ಹಿಂದಿನ ಭಕ್ತಿ ಒಂದೇ ಎಂದು ಡಾ.ಭಾಗವತ್ ಹೇಳಿದರು.

ಭಾರತದ ಡಿಎನ್‌ಎ ಸಾವಿರಾರು ವರ್ಷಗಳಿಂದ ಒಂದೇ ಆಗಿದೆ. ಜೀವನ ಉತ್ತಮವಾಗುತ್ತಿದ್ದಂತೆ ಜನರು ತಮ್ಮ ಮೂಲದ ಕಡೆಗೆ ಮರಳುತ್ತಾರೆ. ಆದ್ದರಿಂದ ಕೆಲವರು ಹಿಂದೂ ಎಂಬುದನ್ನು ತಾವು ಹೇಳದೇ ಇದ್ದರೂ, ಕಾಲಕ್ರಮೇಣ ಹೇಳತೊಡಗುತ್ತಾರೆ. ಹಿಂದೂ ರಾಷ್ಟ್ರ ಎಂದರೆ ಯಾರನ್ನೂ ಹೊರತುಪಡಿಸುವುದಲ್ಲ. ಅದು ಯಾವುದೇ ಅಧಿಕಾರ ಆಧಾರಿತ ಪರಿಕಲ್ಪನೆಯಲ್ಲ ಎಂದರು.

ಸಂಘ ಸಮಾಜದ ಉನ್ನತಿಗೆ ಎರಡು ಮಾರ್ಗಗಳನ್ನು ಅನುಸರಿಸುತ್ತದೆ, ಒಂದು ವ್ಯಕ್ತಿಯ ಅಭಿವೃದ್ಧಿ ಮತ್ತು ಅದೇ ವ್ಯಕ್ತಿಯಿಂದ ಸಮಾಜ ಸೇವೆಯೆ ಸಂಘದ ಪ್ರವೃತ್ತಿಯಾಗಿದೆ ಎಂದು ತಿಳಿಸಿದರು.

ಸಂಘ ಸ್ವಯಂಸೇವಕರ ವೈಯಕ್ತಿಕ ಸಮರ್ಪಣೆಯ ಮೇಲೆ ನಡೆಯುತ್ತದೆ. “ಗುರುದಕ್ಷಿಣೆ” ಅದರ ಕಾರ್ಯಪದ್ಧತಿಯ ಮುಖ್ಯ ಅಂಶ. ಈ ಮೂಲಕ ಪ್ರತಿಯೊಬ್ಬ ಸ್ವಯಂಸೇವಕ ತನ್ನ ನಿಷ್ಠೆ ಮತ್ತು ಆಸ್ಥೆಯನ್ನು ವ್ಯಕ್ತಪಡಿಸುತ್ತಾನೆ. ಸಂಘದ ಕಾಳಜಿ ವ್ಯಕ್ತಿಗಳ ಆಚಾರ-ವಿಚಾರ-ಸಂಸ್ಕಾರ ಸರಿಯಾಗಿ ಇರುವುದರಿಂದ ಸಂಘಕ್ಕೆ ವಿರೋಧವೂ ಎದುರಾಗಿದೆ, ಉಪೇಕ್ಷೆಯೂ ಬಂದಿದೆ. ಆದರೂ ಸಂಘ ಸಮಾಜವನ್ನು ತನ್ನದಾಗಿ ಪರಿಗಣಿಸಿದೆ ಎಂದು ಡಾ.ಮೋಹನ್ ಭಾಗವತ್ ಹೇಳಿದರು.

ಮೂರು ದಿನಗಳ ಉಪನ್ಯಾಸ ಮಾಲಿಕೆಯ ಮೊದಲ ದಿನ ನಿವೃತ್ತ ನ್ಯಾಯಾಧೀಶರು, ಮಾಜಿ ರಾಯಭಾರಿಗಳು, ಆಡಳಿತಾಧಿಕಾರಿಗಳು, ವಿವಿಧ ರಾಷ್ಟ್ರಗಳ ಉನ್ನತಾಧಿಕಾರಿಗಳು, ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು, ಮಾಜಿ ಸೈನಿಕರು, ಕಲೆ ಮತ್ತು ಕ್ರೀಡೆ ಕ್ಷೇತ್ರದ ಗಣ್ಯರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಸಂಘದ ಸರ್ಕಾರ್ಯವಾಹ್ ದತ್ತಾತ್ರೇಯ ಹೊಸಬಾಳೆ, ಉತ್ತರ ಪ್ರಾಂತ ಸಂಘಚಾಲಕ ಪವನ್ ಜಿಂದಲ್ ಮತ್ತು ದೆಹಲಿ ಪ್ರಾಂತ ಸಂಘಚಾಲಕ ಡಾ. ಅನಿಲ್ ಅಗ್ರವಾಲ್ ಉಪಸ್ಥಿತರಿದ್ದರು.

100 ವರ್ಷಗಳ ಸಂಘಯಾತ್ರೆಯ ಹೊಸ ದಿಕ್ಕುಗಳು” ಎಂಬ ವಿಷಯದಡಿ ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಘದ ಬಗ್ಗೆ ಸಮಾಜದಲ್ಲಿ ನಿಜವಾದ ಮಾಹಿತಿ ತಲುಪಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2018 ರಲ್ಲಿಯೂ ಇದೇ ರೀತಿಯ ಕಾರ್ಯಕ್ರಮ ನಡೆದಿತ್ತು. ಈ ಬಾರಿ ದೇಶದ ನಾಲ್ಕು ಕಡೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande