ನವದೆಹಲಿ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಮಂಗಳವಾರ ದೆಹಲಿ ವಿಜ್ಞಾನ ಭವನದಲ್ಲಿ “ಸಂಘದ 100 ವರ್ಷಗಳ ಪ್ರಯಾಣ: ಹೊಸ ದಿಗಂತಗಳು” ಎಂಬ ವಿಷಯದಡಿ ಮೂರು ದಿನಗಳ ಸಂವಾದವನ್ನು ಉದ್ಘಾಟಿಸಿದರು.
ಸಮಾಜದ ನಾನಾ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಮಾತನಾಡಿದ ಅವರು, “ಪ್ರತಿಯೊಂದು ರಾಷ್ಟ್ರಕ್ಕೂ ವಿಶ್ವಕ್ಕೆ ನೀಡುವ ಕೊಡುಗೆ ಇದೆ. ಭಾರತವು ವಿಶ್ವ ನಾಯಕನಾಗುವ ಪ್ರಕ್ರಿಯೆಯಲ್ಲಿ ಸಂಘದ ಪಾತ್ರ ಮಹತ್ವದ್ದಾಗಿದೆ” ಎಂದು ಹೇಳಿದರು.
ಭಾರತದ ಉದಯ ನಿಧಾನವಾಗಿದ್ದರೂ ಅದು ನಿರಂತರ ಪ್ರಗತಿಪಥದಲ್ಲಿದೆ ಎಂದು ಅವರು ಒಪ್ಪಿಕೊಂಡರು.
ಸಂಘದ ಗುರಿಯೂ ಈ ಉದಯದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದರು.
ಸಂಘದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ, ಅಧಿಕೃತ ಮಾಹಿತಿಯ ಕೊರತೆಯಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ಲಭ್ಯವಿರುವ ಮಾಹಿತಿಯು ಹೆಚ್ಚಾಗಿ ಗ್ರಹಿಕೆಯನ್ನು ಆಧರಿಸಿದೆ, ಯಾರನ್ನೂ ಮನವೊಲಿಸುವುದು ನಮ್ಮ ಗುರಿಯಲ್ಲ. ಸರಿಯಾದ ಮಾಹಿತಿಯನ್ನು ನೀಡುವುದು, ತೀರ್ಮಾನ ಕೈಗೊಳ್ಳುವುದು ಕೇಳುಗರ ಹಕ್ಕು” ಎಂದು ಭಾಗವತ್ ತಿಳಿಸಿದರು.
2018ರಲ್ಲಿ ವಿಜ್ಞಾನ ಭವನದಲ್ಲಿ ನಡೆದ ತಮ್ಮ ಹಿಂದಿನ ಸಂವಾದವನ್ನು ಸ್ಮರಿಸಿಕೊಂಡ ಭಾಗವತ್, ಅಂದಿನಂತೆ ಈಗಲೂ ಸಂಘದ ಕುರಿತು ಸತ್ಯಗಳನ್ನು ಹಂಚಿಕೊಳ್ಳುವ ಅಗತ್ಯವಿದೆ ಎಂದರು.
ಈ ಬಾರಿ ಸಂಘವು ಶತಮಾನೋತ್ಸವ ಹಂತ ತಲುಪಿರುವುದರಿಂದ ಮುಂದಿನ ದಿಕ್ಕು-ದೃಷ್ಟಿಕೋನವನ್ನು ಹಂಚಿಕೊಳ್ಳುವುದು ಉದ್ದೇಶವಾಗಿದೆ ಎಂದರು.
ದೆಹಲಿಯ ಜೊತೆಗೆ ದೇಶದ ಇನ್ನೂ ಮೂರು ಸ್ಥಳಗಳಲ್ಲಿ ಈ ಸಂವಾದ ನಡೆಯಲಿದ್ದು, ಭಾಗವಹಿಸುವವರಲ್ಲಿ 70-75% ರಷ್ಟು ಹೊಸ ಮುಖಗಳೇ ಎಂದು ಅವರು ತಿಳಿಸಿದರು.
ಸಂಘದ ಉದ್ದೇಶವನ್ನು ವಿವರಿಸಿದ ಭಾಗವತ್, “ಸಂಘವನ್ನು ಏಕೆ ಪ್ರಾರಂಭಿಸಲಾಯಿತು? ಸ್ವಯಂಸೇವಕರು ಅಡೆತಡೆಗಳ ನಡುವೆಯೂ ಹೇಗೆ ಮುನ್ನಡೆಸಿದರು? ನೂರು ವರ್ಷಗಳ ಬಳಿಕವೂ ಹೊಸ ದಿಗಂತಗಳ ಕುರಿತು ಏಕೆ ಚರ್ಚೆ ನಡೆಯುತ್ತಿದೆ? ಇದರ ಉತ್ತರ ಒಂದೇ ವಾಕ್ಯದಲ್ಲಿ ಸಿಗುತ್ತದೆ. ನಮ್ಮ ಪ್ರಾರ್ಥನೆಯ ಕೊನೆಯಲ್ಲಿ ‘ಭಾರತ್ ಮಾತಾ ಕಿ ಜೈ’ ಎಂದು ನಾವು ಹೇಳುತ್ತೇವೆ. ಇದು ನಮ್ಮ ದೇಶ, ಇದನ್ನು ಪ್ರಶಂಸಿಸಬೇಕು ಮತ್ತು ಜಗತ್ತಿನಲ್ಲಿ ಪ್ರಮುಖ ಸ್ಥಾನವನ್ನು ಪಡೆಯಬೇಕು” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa