ಅಹಮದಾಬಾದ್, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗುಜರಾತ್‌ನ ಹನ್ಸಲ್ಪುರದಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್‌ನಿಂದ ಕಂಪನಿಯ ಮೊದಲ ಜಾಗತಿಕ ಬ್ಯಾಟರಿ ಎಲೆಕ್ಟ್ರಿಕ್ ವಾಹನ ‘ಇ-ವಿಟಾರಾ’ವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು.
ಭಾರತದಲ್ಲೇ ತಯಾರಾಗಿರುವ ಈ ಎಲೆಕ್ಟ್ರಿಕ್ ಕಾರು ಯುರೋಪ್, ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಆಗಲಿದೆ. ಇದರಿಂದ ಭಾರತ ಜಾಗತಿಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳಲಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಹನ್ಸಲ್ಪುರದಲ್ಲಿರುವ ಸುಜುಕಿಯ ಇವಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ, ಟಿಡಿಎಸ್ ಲಿಥಿಯಂ-ಐಯಾನ್ ಬ್ಯಾಟರಿ ಘಟಕದ ಉದ್ಘಾಟನೆಯೂ ನೆರವೇರಿಸಿದರು.
ತೋಷಿಬಾ, ಡೆನ್ಸೊ ಮತ್ತು ಸುಜುಕಿಯ ಜಂಟಿ ಹೂಡಿಕೆಯಲ್ಲಿ ನಿರ್ಮಿತ ಈ ಘಟಕದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್‌ಗಳ ಸ್ಥಳೀಯ ಉತ್ಪಾದನೆ ನಡೆಯಲಿದೆ. ಇದರ ಮೂಲಕ ಬ್ಯಾಟರಿ ಮೌಲ್ಯದ ಶೇಕಡಾ 80 ಕ್ಕೂ ಹೆಚ್ಚು ಭಾರತದಲ್ಲೇ ತಯಾರಾಗಲಿದ್ದು, ಇದು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮತ್ತೊಂದು ದೊಡ್ಡ ಹೆಜ್ಜೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಿಸಾಶಿ ಟಕೇಚಿ ಮತ್ತು ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa