ನವದೆಹಲಿ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಇತ್ತೀಚೆಗೆ ಮುಕ್ತಾಯಗೊಂಡ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಪರಮಾಣು ಶಕ್ತಿಯನ್ನು ಉತ್ತೇಜಿಸಲು ಯಾವುದೇ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, 2025-26ರ ಕೇಂದ್ರ ಬಜೆಟ್‌ನಲ್ಲಿ ಪರಮಾಣು ಶಕ್ತಿಗೆ ಸಂಬಂಧಿಸಿದ ಮಹತ್ವದ ಭರವಸೆಗಳನ್ನು ನೀಡಲಾಗಿತ್ತು. ಆದರೆ ಅವುಗಳಲ್ಲಿ ಒಂದನ್ನೂ ಮಸೂದೆ ರೂಪದಲ್ಲಿ ಸಂಸತ್ತಿನ ಅಧಿವೇಶನಕ್ಕೆ ತರಲಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಅವರು ವಿಶೇಷವಾಗಿ 2010ರ ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ ತಿದ್ದುಪಡಿ ಪ್ರಸ್ತಾವನೆ ಹಾಗೂ ಖಾಸಗಿ ಕಂಪನಿಗಳಿಗೆ ಪರಮಾಣು ಸ್ಥಾವರಗಳನ್ನು ಸ್ಥಾಪಿಸಲು ಅವಕಾಶ ನೀಡುವ ಪರಮಾಣು ಶಕ್ತಿ ಕಾಯ್ದೆ ತಿದ್ದುಪಡಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಗಳನ್ನು ಸರ್ಕಾರ ಮಂಡಿಸುತ್ತದೆಯೇ ಅಥವಾ ಇವು ಸಹ ಭರವಸೆಯಾಗಿಯೇ ಉಳಿಯುತ್ತವೆಯೇ ಎಂದು ಪ್ರಶ್ನಿಸಿದ್ದಾರೆ.
ಸ್ವತಂತ್ರ ನಿಯಂತ್ರಕ ಸಂಸ್ಥೆ ಸ್ಥಾಪನೆಗೆ ಸಂಬಂಧಿಸಿದ ಮಸೂದೆಗೆ ಏನಾಯಿತು? ಪಾರದರ್ಶಕತೆ ಹಾಗೂ ನ್ಯಾಯಸಮ್ಮತ ನಿಯಂತ್ರಣಕ್ಕಾಗಿ ಅಂತಹ ಸಂಸ್ಥೆ ಅಗತ್ಯ ಎಂದರು. ಜೊತೆಗೆ, 2010ರಲ್ಲಿ ನಾಗರಿಕ ಹೊಣೆಗಾರಿಕೆ ಕಾಯ್ದೆ ರೂಪಿಸುವಲ್ಲಿ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ನೆನಪಿಸಿದ್ದು. ಸರ್ಕಾರ ತಿದ್ದುಪಡಿ ತರಲು ಮುಂದಾದರೆ, ಅದು ಆ ಸಾಧನೆಗಳನ್ನು ದುರ್ಬಲಗೊಳಿಸುವಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗಮನಾರ್ಹವಾಗಿ, ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010 ಅಡಿಯಲ್ಲಿ ಪರಮಾಣು ಅಪಘಾತ ಸಂಭವಿಸಿದರೆ, ಸ್ಥಾವರ ನಿರ್ವಾಹಕರು ಗರಿಷ್ಠ ₹1,500 ಕೋಟಿ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಹಾನಿ ಹೆಚ್ಚಾದರೆ ಕೇಂದ್ರ ಸರ್ಕಾರ ಹಾಗೂ ಅಂತರರಾಷ್ಟ್ರೀಯ ನಿಧಿಗಳು ನೆರವಾಗುವಂತೆ ನಿಯಮ ಮಾಡಲಾಗಿದೆ. ದೋಷಪೂರಿತ ಉಪಕರಣ ಪೂರೈಕೆದಾರರೂ ಸಹ ಹೊಣೆಗಾರರಾಗುತ್ತಾರೆ.
ಪರಮಾಣು ಶಕ್ತಿಯನ್ನು ಉತ್ತೇಜಿಸಲು ಬಯಸುವ ಸರ್ಕಾರವು, ನಿಜವಾಗಿಯೂ ಖಾಸಗಿ ಹೂಡಿಕೆಗೆ ದಾರಿ ತೆರೆದುಕೊಳ್ಳಲು ಬಯಸಿದರೆ, ಇಂತಹ ಶಾಸನಾತ್ಮಕ ಕ್ರಮಗಳಿಗೆ ತಕ್ಷಣ ಆದ್ಯತೆ ನೀಡಬೇಕು ಎಂದು ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa