ಕೋಲ್ಕತ್ತಾ, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್‌ಎಸ್‌ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಬೃಹತ್ ದಾಳಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಕೋಲ್ಕತ್ತಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಳಿ ನಡೆದಿದ್ದು, ಪ್ರಮುಖವಾಗಿ ಮುರ್ಷಿದಾಬಾದ್ ಮತ್ತು ಬಿರ್ಭೂಮ್ ಜಿಲ್ಲೆಗಳಲ್ಲಿ ದಾಳಿ ನಡೆದಿದೆ.
ಮುರ್ಷಿದಾಬಾದ್‌ನ ಬರ್ತ್ರಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಶಾಸಕ ಜೀವನಕೃಷ್ಣ ಸಹಾ ಅವರ ಮನೆಗೆ ಬೆಳಗ್ಗೆಯಿಂದಲೇ ಇಡಿ ಅಧಿಕಾರಿಗಳು ಕೇಂದ್ರ ಭದ್ರತಾ ಪಡೆ ಸಹಕಾರದೊಂದಿಗೆ ಪ್ರವೇಶಿಸಿ ಶೋಧ ನಡೆಸಿದರು.
ಈ ವೇಳೆ ಶಾಸಕರು ಮನೆಯಲ್ಲಿ ಇದ್ದು, ಅವರನ್ನು ವಿಚಾರಣೆಗೂ ಒಳಪಡಿಸಲಾಯಿತು.
ಸಹಾ ಅವರ ಅತ್ತೆ–ಮಾವ ಮನೆ (ರಘುನಾಥಗಂಜ್) ಹಾಗೂ ಬಿರ್ಭೂಮ್ ಜಿಲ್ಲೆಯ ಸೈಂಥಿಯಾದಲ್ಲಿ ಟಿಎಂಸಿ ಕೌನ್ಸಿಲರ್ ಆಗಿರುವ ಅವರ ಚಿಕ್ಕಮ್ಮ ಮಾಯಾ ಸಹಾ ಮನೆ ಮೇಲೂ ದಾಳಿ ನಡೆದಿದೆ.
ಇದರ ಜೊತೆಗೆ, ಮುರ್ಷಿದಾಬಾದ್‌ನ ಮಾಹಿಸ್ ಗ್ರಾಮದ ಬ್ಯಾಂಕ್ ಉದ್ಯೋಗಿ ರಾಜೇಶ್ ಘೋಷ್ ಮನೆ ಮೇಲೂ ಇಡಿ ದಾಳಿ ನಡೆಸಿದೆ. ಕೋಲ್ಕತ್ತಾದ ಹಲವೆಡೆ ಇಡಿ ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.
ಗಮನಾರ್ಹವೆಂದರೆ, ಜೀವನಕೃಷ್ಣ ಸಹಾ ಅವರನ್ನು ಸಿಬಿಐ ಏಪ್ರಿಲ್ 2023ರಲ್ಲಿ ಇದೇ ಪ್ರಕರಣದಲ್ಲಿ ಬಂಧಿಸಿತ್ತು. ಆ ವೇಳೆ ಅವರು ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಎರಡು ಮೊಬೈಲ್‌ಗಳನ್ನು ಕೊಳಕ್ಕೆ ಎಸೆದಿದ್ದರೆಂಬ ಆರೋಪ ಹೊರ ಬಂದಿತ್ತು. ನಂತರ ಅವುಗಳನ್ನು ವಶಪಡಿಸಿಕೊಂಡು ಸಾಕ್ಷ್ಯಗಳಾಗಿ ಬಳಸಲಾಗಿತ್ತು. ಸುಮಾರು 13 ತಿಂಗಳು ಜೈಲಿನಲ್ಲಿದ್ದ ಸಹಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa