ಶಿಮ್ಲಾ, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ನಿರಂತರ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ.
ಭೂಕುಸಿತದಿಂದಾಗಿ ಅನೇಕ ರಸ್ತೆಗಳಲ್ಲಿ ಸಂಚಾರ ಸ್ಥಗಿತವಾಗಿದೆ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರಾ, ಚಂಬಾ, ಉನಾ, ಮಂಡಿ, ಕುಲ್ಲು, ಸೋಲನ್, ಬಿಲಾಸ್ಪುರ್, ಹಮೀರ್ಪುರ್ ಜಿಲ್ಲೆಗಳಲ್ಲಿಯೂ ಹಾಗೂ ಲಾಹೌಲ್-ಸ್ಪಿತಿ ಭಾಗದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.
ಕಾಂಗ್ರಾ ಜಿಲ್ಲೆಯಲ್ಲಿ ಪರಿಸ್ಥಿತಿ ತೀವ್ರವಾಗಿದ್ದು, ಇಂದೋರಾ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮಾರುಕಟ್ಟೆಗಳು, ಸರ್ಕಾರಿ ಕಚೇರಿಗಳು ಹಾಗೂ ಮನೆಗಳಿಗೆ ನೀರು ನುಗ್ಗಿದ್ದು, ವ್ಯಾಪಕ ಹಾನಿಯಾಗಿದೆ. ಭೂಕುಸಿತದಿಂದ ಸುಲ್ಯಾಲಿ-ದುನೇರಾ ಹಾಗೂ ನೂರ್ಪುರ್ ಕೋರ್ಟ್ ರಸ್ತೆಗಳು ಮುಚ್ಚಲ್ಪಟ್ಟಿವೆ.
ಚಂಬಾ ಜಿಲ್ಲೆಯಲ್ಲಿ 82 ಮುಖ್ಯ ರಸ್ತೆಗಳು ಸ್ಥಗಿತಗೊಂಡಿವೆ, 410 ವಿದ್ಯುತ್ ಪರಿವರ್ತಕಗಳು ಕಾರ್ಯನಿರ್ವಹಣೆಯಿಂದ ಹೊರಬಿದ್ದಿವೆ. 40 ಕುಡಿಯುವ ನೀರಿನ ಯೋಜನೆಗಳಿಗೆ ಹೊಡೆತ ಬಿದ್ದಿದೆ. ಡಾಲ್ಹೌಸಿಯಲ್ಲಿ ಮೋಡ ಸ್ಫೋಟದಿಂದ ಮೂರು ವಾಹನಗಳು ಕೊಚ್ಚಿಕೊಂಡು ಹೋಗಿದ್ದು, ಕಟ್ಟಡಗಳಿಗೆ ಹಾನಿಯಾಗಿದೆ. ಕೆಟ್ಟ ಹವಾಮಾನದ ಕಾರಣದಿಂದ ಮಣಿ ಮಹೇಶ್ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಇದುವರೆಗೆ 303 ಮಂದಿ ಸಾವನ್ನಪ್ಪಿದ್ದು, 37 ಮಂದಿ ಕಾಣೆಯಾಗಿದ್ದಾರೆ. ಮಂಡಿ ಜಿಲ್ಲೆಯಲ್ಲಿ ಅತಿ ಹೆಚ್ಚು 51 ಸಾವುಗಳು ಸಂಭವಿಸಿವೆ. ಆಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa