ನವದೆಹಲಿ, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ದೇಶಾದ್ಯಂತ 2.5 ಲಕ್ಷಕ್ಕೂ ಹೆಚ್ಚು ಮುದ್ರಣ ಮತ್ತು ಪ್ಯಾಕೇಜಿಂಗ್ ಉದ್ಯಮಗಳನ್ನು ಪ್ರತಿನಿಧಿಸುವ ಅಖಿಲ ಭಾರತ ಮುದ್ರಣಕಾರರು ಮತ್ತು ಪ್ಯಾಕೇಜರ್‌ಗಳ ಒಕ್ಕೂಟ ಶನಿವಾರ ಪ್ರಮುಖ ವರ್ಚುವಲ್ ಸಭೆಯನ್ನು ನಡೆಸಿತು.
ಈ ಸಭೆಯ ಪ್ರಮುಖ ಉದ್ದೇಶ ಸರ್ಕಾರದ ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆ ದರ ಸುಧಾರಣೆ ಕುರಿತ ಚರ್ಚೆಯಾಗಿತ್ತು. ಅಸ್ತಿತ್ವದಲ್ಲಿರುವ ಬಹು ಹಂತದ ರಚನೆಯನ್ನು ಸರಳಗೊಳಿಸಿ, ಕೇವಲ 5% ಮತ್ತು 18% ದರಗಳ ಎರಡು ಸ್ಲ್ಯಾಬ್ ವ್ಯವಸ್ಥೆಯನ್ನು ಪರಿಚಯಿಸುವ ಪ್ರಸ್ತಾವನೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ 96 ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸಿದ್ದು, ಮುದ್ರಣ ಮತ್ತು ಪ್ಯಾಕೇಜಿಂಗ್ ವಲಯವನ್ನು 5% ಜಿಎಸ್‌ಟಿ ಸ್ಲ್ಯಾಬ್‌ಗೆ ತರಬೇಕೆಂದು ಎಲ್ಲರೂ ಸರ್ವಾನುಮತದಿಂದ ಸರ್ಕಾರಕ್ಕೆ ಒತ್ತಾಯಿಸಿದರು. ವಲಯದ ಸ್ಪರ್ಧಾತ್ಮಕತೆ, ಉದ್ಯೋಗ ಸೃಷ್ಟಿ ಹಾಗೂ ರಫ್ತು ಸಾಮರ್ಥ್ಯವನ್ನು ಬಲಪಡಿಸಲು ಕಡಿಮೆ ತೆರಿಗೆ ದರ ಅತ್ಯಗತ್ಯ ಎಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ಜಿಎಸ್‌ಟಿ ಕಾನೂನು ತಜ್ಞ ಎನ್.ಕೆ. ಥಮನ್ ಮಾತನಾಡಿ, ಮುದ್ರಣ ಮತ್ತು ಪ್ಯಾಕೇಜಿಂಗ್ ಭಾರತದ ಆರ್ಥಿಕ ರಚನೆಯ ಅವಿಭಾಜ್ಯ ಅಂಗವಾಗಿದೆ. ಈ ವಲಯವನ್ನು 18% ಸ್ಲ್ಯಾಬ್‌ನಲ್ಲಿ ಇರಿಸಿದರೆ, ನಾವೀನ್ಯತೆ ಕುಗ್ಗಿ, ವೆಚ್ಚ ಹೆಚ್ಚಿ, ಜಾಗತಿಕ ಸ್ಪರ್ಧಾತ್ಮಕತೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಉದ್ಯಮಿಯೂ ಆಗಿರುವ ಚಾರ್ಟರ್ಡ್ ಅಕೌಂಟೆಂಟ್ ಉದಯ್ ಧೋಟೆ ಅವರು ಮಾತನಾಡಿ ಹೆಚ್ಚಿನ ತೆರಿಗೆ ದರ ಸಣ್ಣ ಉದ್ಯಮಗಳ ಮೇಲೆ ಹೊರೆ ಹಾಕುತ್ತದೆ. ಇದರಿಂದ ಅಗತ್ಯ ಪ್ಯಾಕೇಜಿಂಗ್ ಉತ್ಪನ್ನಗಳ ಬೆಲೆ ಏರಿಕೆಗೊಂಡು ಗ್ರಾಹಕರ ಮೇಲೂ ನೇರ ಹೊಡೆತ ಬೀಳುತ್ತದೆ ಎಂದು ಅಭಿಪ್ರಾಯಪಟ್ಟರು.
ಉದ್ಯಮದ ಆರ್ಥಿಕ ಕೊಡುಗೆ ಮತ್ತು ನಿರೀಕ್ಷೆಗಳು
ಭಾರತದ ಮುದ್ರಣ ಮತ್ತು ಪ್ಯಾಕೇಜಿಂಗ್ ವಲಯವು 2025ರ ವೇಳೆಗೆ 150 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ ತಲುಪಲಿದೆ ಎಂಬ ನಿರೀಕ್ಷೆಯಿದೆ. ಪ್ಯಾಕೇಜಿಂಗ್ ವಿಭಾಗವು 2025ರಲ್ಲಿ 101 ಬಿಲಿಯನ್ ಡಾಲರ್ ದಾಟಿ, 2030ರ ವೇಳೆಗೆ 170 ಬಿಲಿಯನ್ ಡಾಲರ್ ಗುರಿ ತಲುಪುವ ಸಾಧ್ಯತೆ ಇದೆ. ಈ ವಲಯವು ವಾರ್ಷಿಕ 10.73% ಬೆಳವಣಿಗೆಯ ದರದಲ್ಲಿ ಮುಂದೆ ಸಾಗುತ್ತಿದ್ದು, ಸುಮಾರು 2.5 ಮಿಲಿಯನ್ ಜನರಿಗೆ ನೇರ ಉದ್ಯೋಗವನ್ನು ಒದಗಿಸಿದೆ. ಜೊತೆಗೆ, ಕಾಗದ, ಶಾಯಿ ಹಾಗೂ ಲಾಜಿಸ್ಟಿಕ್ಸ್ ಮುಂತಾದ ಸಂಬಂಧಿತ ವಲಯಗಳಿಗೆ ಉತ್ತೇಜನ ನೀಡುತ್ತಿದೆ.
ಪ್ರಸ್ತುತ ಜಿಎಸ್ಟಿ ದರಗಳು ಮತ್ತು ಪರಿಣಾಮಗಳು:
ಕಾರ್ಡ್‌ಬೋರ್ಡ್, ಪೆಟ್ಟಿಗೆಗಳು, ಕಾಗದ ಉತ್ಪನ್ನಗಳಿಗೆ – 12% ಜಿಎಸ್ಟಿ (ಇತ್ತೀಚೆಗೆ 18%ರಿಂದ ಕಡಿತಗೊಂಡಿದೆ)
ಲೇಖನ ಸಾಮಗ್ರಿಗಳಿಗೆ (ಲಕೋಟೆ, ಡೈರಿಗಳು, ರಿಜಿಸ್ಟರ್‌ಗಳು) – 18% ಜಿಎಸ್ಟಿ
ಪುಸ್ತಕಗಳಂತಹ ಅಗತ್ಯ ಮುದ್ರಿತ ಸಾಮಗ್ರಿಗಳಿಗೆ – 0% ಅಥವಾ 5% ಜಿಎಸ್ಟಿ
ಹೊಸ ಜಿಎಸ್ಟಿ ಚೌಕಟ್ಟಿನಲ್ಲಿ ಅನೇಕ ಸೇವೆಗಳು 18% ತೆರಿಗೆ ಸ್ಲ್ಯಾಬ್‌ಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಇದರಿಂದ ಉತ್ಪಾದನಾ ವೆಚ್ಚವು 6% ವರೆಗೆ ಹೆಚ್ಚುವ ಸಾಧ್ಯತೆ ಇದೆ ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ.
ಮುಂದಿನ ಹಂತಗಳು:
ಜಿಎಸ್‌ಟಿ ಕೌನ್ಸಿಲ್ ಮತ್ತು ಹಣಕಾಸು ಸಚಿವಾಲಯಕ್ಕೆ ವಿವರವಾದ ಜ್ಞಾಪಕ ಪತ್ರವನ್ನು ಸಲ್ಲಿಸುವುದಾಗಿ ಎಐಎಫ್‌ಪಿಪಿ ಘೋಷಿಸಿದೆ. ಸರ್ಕಾರ ಬೆಂಬಲ ನೀಡಿದರೆ, ಈ ವಲಯವು ಸ್ಥಳೀಯ ಉದ್ಯೋಗ ಹೆಚ್ಚಿಸುವುದಲ್ಲದೆ, ರಫ್ತಿಗೂ ಗಮನಾರ್ಹ ಕೊಡುಗೆ ನೀಡುತ್ತದೆ ಎಂದು ಒಕ್ಕೂಟ ವಿಶ್ವಾಸ ವ್ಯಕ್ತಪಡಿಸಿದೆ.
ಸಭೆಯಲ್ಲಿ ಭಾಗವಹಿಸಿದ್ದ ಬಹು ಭಾ಼ಷಾ ಸುದ್ದಿ ಸಂಸ್ಥೆ ಹಿಂದೂಸ್ತಾನ್ ಸಮಾಚಾರ್ ಅಧ್ಯಕ್ಷ ಅರವಿಂದ್ ಮರ್ಡಿಕರ್ ಅವರು ಸಹ ಎಐಎಫ್‌ಪಿಪಿ ಮನವಿಗೆ ಬೆಂಬಲ ವ್ಯಕ್ತಪಡಿಸಿ, ಇಡೀ ಉದ್ಯಮವನ್ನು 5% ಸ್ಲ್ಯಾಬ್‌ಗೆ ಸೇರಿಸಿದರೆ ಉತ್ಪಾದನಾ ವೆಚ್ಚ ಕಡಿಮೆಯಾಗುವುದರೊಂದಿಗೆ, ಅಂತಿಮ ಬಳಕೆದಾರರು ಹಾಗೂ ರಫ್ತುದಾರರು ಇಬ್ಬರಿಗೂ ಪ್ರಯೋಜನವಾಗುತ್ತದೆ ಎಂದು ಹೇಳಿದರು. ಜಿಎಸ್ಟಿ ಮಂಡಳಿಯ ಮುಂದೆ ಈ ವಿಷಯವನ್ನು ಎತ್ತುವುದಾಗಿ ಭರವಸೆ ನೀಡಿದರು.
ಎಐಎಫ್‌ಪಿಪಿ ಪರಿಚಯ
ಅಖಿಲ ಭಾರತ ಮುದ್ರಣ ಮತ್ತು ಪ್ಯಾಕೇಜರ್‌ಗಳ ಒಕ್ಕೂಟ ದೇಶಾದ್ಯಂತ ಹರಡಿರುವ ಮುದ್ರಣ ಮತ್ತು ಪ್ಯಾಕೇಜಿಂಗ್ ವ್ಯವಹಾರಗಳನ್ನು ಪ್ರತಿನಿಧಿಸುತ್ತದೆ. ಈ ಒಕ್ಕೂಟವು ಉದ್ಯಮಕ್ಕೆ ನೀತಿ ಅಡೆತಡೆಗಳನ್ನು ತೆಗೆದುಹಾಕಲು, ನವೀನತೆಯನ್ನು ಉತ್ತೇಜಿಸಲು ಮತ್ತು ಆರ್ಥಿಕ ಸುಧಾರಣೆಗಳ ಮೂಲಕ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಲು ಕೆಲಸ ಮಾಡುತ್ತಿದೆ.
ಸಭೆಯನ್ನು ಮುದ್ರಣ ಉದ್ಯಮದ ಹಿರಿಯ ವ್ಯಕ್ತಿ ಪ್ರೊ. ಕಮಲ್ ಚೋಪ್ರಾ ಅವರು ನಿರ್ವಹಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa