ಬೆಂಗಳೂರು, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನ ಹಿಂದಿ ಬರಹಗಾರರ ಪ್ರಸಿದ್ಧ ಸಾಹಿತ್ಯ ಸಂಸ್ಥೆ 'ಶಬ್ದ' 2025ನೇ ಸಾಲಿನ ' ಅಜೇಯ ಶಬ್ದ ಸೃಜನ್ ಸಮ್ಮಾನ್ ಮತ್ತು 'ದಕ್ಷಿಣ ಭಾರತ ಶಬ್ದ ಹಿಂದಿ ಸೇವೀ ಸಮ್ಮಾನ್' ವಿಜೇತರ ಹೆಸರನ್ನು ಪ್ರಕಟಿಸಿದೆ. ಹಿಂದಿಯ ಖ್ಯಾತ ಕವಯಿತ್ರಿ ಜೆಸಿಂತಾ ಕೆರ್ಕೆಟ್ಟಾ ಅವರ 'ಪ್ರೇಮ್ ಮೇ ಪೇಡ್ ಹೋನಾ' ಕವನ ಸಂಕಲನಕ್ಕೆ ಒಂದು ಲಕ್ಷ ರೂಪಾಯಿ ಮೌಲ್ಯದ 'ಅಜೇಯ ಶಬ್ದ ಸೃಜನ್ ಸಮ್ಮಾನ್' ಘೋಷಿಸಿದೆ.
ಕರ್ನಾಟಕದಲ್ಲಿ ಉನ್ನತ ಮತ್ತು ಪ್ರೌಢ ಶಿಕ್ಷಣದಲ್ಲಿ ಹಿಂದಿ ಭಾಷೆ ಮತ್ತು ಸಾಹಿತ್ಯದ ಉತ್ತೇಜನದಲ್ಲಿ ಗಮನಾರ್ಹ ಕೊಡುಗೆಗಾಗಿ ಶ್ರಮಿಸುತ್ತಿರುವ ಹಿಂದಿ ಶಿಕ್ಷಕ ಮತ್ತು ಶಿಕ್ಷಣತಜ್ಞ ಪ್ರೊಫೆಸರ್ ಪ್ರಭಾಶಂಕರ್ ಪ್ರೇಮಿ ಶಬ್ದ ಹಿಂದಿ ಸೇವೀ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದು ಪ್ರಶಸ್ತಿ ೨೫ ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಶಬ್ದ'ದ ಅಧ್ಯಕ್ಷರಾದ ಡಾ. ಶ್ರೀನಾರಾಯಣ್ ಸಮೀರ್ ಈ ಕುರಿತು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಡಿಸೆಂಬರ್ 28, 2025 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಾರಸ್ವತ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಬ್ಬರಿಗೂ ಸಾಂಪ್ರದಾಯಿಕ ಮೈಸೂರು ಪೇಟಾ, ಸ್ಮರಣಿಕೆ, ನಾರಿಕೇಳ ಮತ್ತು ಅಂಗವಸ್ತ್ರದೊಂದಿಗೆ ಬಹುಮಾನದ ಹಣವನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಕಟಣೆಯ ಪ್ರಕಾರ, ಹಿಂದಿ ಭಾಷೆ ಮತ್ತು ಸಾಹಿತ್ಯದ ಸೃಜನಶೀಲ ವಿದ್ವಾಂಸರ ಐದು ಸದಸ್ಯರ ಮೌಲ್ಯಮಾಪನ ಸಮಿತಿಯ ಶಿಫಾರಸಿನ ಆಧಾರದ ಮೇಲೆ ತೀರ್ಪುಗಾರರು ಈ ಪ್ರಶಸ್ತಿಗಳಿಗೆ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಶಸ್ತಿ ವಿಜೇತರ ಕೃತಿಗಳ ಪಾರದರ್ಶಕ ಮೌಲ್ಯಮಾಪನದ ಜೊತೆಗೆ, ಇದುವರೆಗಿನ ಅವರ ಸೃಜನಶೀಲ ಕೊಡುಗೆಯನ್ನು ಸಹ ಈ ನಿರ್ಧಾರದಲ್ಲಿ ಆಧಾರವಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಜೇಯ ಶಬ್ದ ಸೃಜನ್ ಸಮ್ಮಾನ್ ಪ್ರಶಸ್ತಿಗೆ ನೀಡಿದ ಶಿಫಾರಸಿನಲ್ಲಿ, ಕವಯಿತ್ರಿ ಶ್ರೀಮತಿ ಜಸಿಂತಾ ಕೆರ್ಕೆಟ್ಟಾ ಅವರು ಬುಡಕಟ್ಟು ಸಮಾಜದ ಜೀವನ ಮತ್ತು ಹೋರಾಟವನ್ನು ಕಾವ್ಯದಲ್ಲಿ ವ್ಯಕ್ತಪಡಿಸುವ ಮೂಲಕ ನಾಗರಿಕ ಸಮಾಜದ ಗಮನ ಸೆಳೆಯುವಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಅವರ ಕಾವ್ಯವು ಪ್ರೀತಿಯ ವೈಭವದ ಅಭಿವ್ಯಕ್ತಿಯಾಗಿದೆ. ಈ ಕವಿತೆಯಲ್ಲಿ ಬುಡಕಟ್ಟು ಸಮಾಜದ ಚಿತ್ರಹಿಂಸೆ ಮತ್ತು ಮನುಷ್ಯನ ಅನಿಯಂತ್ರಿತ ಶೋಷಣೆಯಿಂದಾಗಿ ಭೂಮಿ ಬಂಜರು ಆಗುತ್ತಿದೆ ಎಂಬ ಹತಾಶ ಕೂಗು ಮತ್ತು ವೈಯಕ್ತಿಕ ಪ್ರೀತಿಯ ಅಪರೂಪದ ಅಭಿವ್ಯಕ್ತಿ ಅಸಾಧಾರಣವಾಗಿದೆ ಎಂದು ತೀರ್ಪುಗಾರರು ಹೇಳಿದ್ದಾರೆ.
ಅದೇ ರೀತಿ, ದಕ್ಷಿಣ ಭಾರತ ಶಬ್ದ ಹಿಂದಿ ಸೇವೀ ಸಮ್ಮಾನ್ ಶಿಫಾರಸಿನಲ್ಲಿ, ಬೆಂಗಳೂರು ಮತ್ತು ಕರ್ನಾಟಕದಲ್ಲಿ ಹಿಂದಿ ಮತ್ತು ಕನ್ನಡ ನಡುವೆ ಸಮನ್ವಯ ಮತ್ತು ಸಾಮರಸ್ಯವನ್ನು ಬೆಳೆಸುವಲ್ಲಿ, ಅದರ ಹರಡುವಿಕೆಯನ್ನು ಅಡೆತಡೆಯಿಲ್ಲದೆ ಮಾಡುವಲ್ಲಿ ಮತ್ತು ಉತ್ತರ ಮತ್ತು ದಕ್ಷಿಣದ ನಡುವಿನ ಪರಸ್ಪರ ಭಾವನೆಯನ್ನು ಬಲಪಡಿಸುವಲ್ಲಿ ಪ್ರೊ. ಪ್ರಭಾಶಂಕರ್ ಪ್ರೇಮಿ ಅವರ ಅಮೂಲ್ಯ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. 'ಬಸವ ಮಾರ್ಗ ಪತ್ರಿಕೆಯ ಸಂಪಾದನೆಯ ಮೂಲಕ, ಅವರು ನಿಸ್ವಾರ್ಥತೆ ಮತ್ತು ಸಮರ್ಪಣೆಯೊಂದಿಗೆ ನಾಗರಿಕ ಜೀವನದಲ್ಲಿ ನೈತಿಕತೆ ಮತ್ತು ಆಡಂಬರಮುಕ್ತ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಪ್ರಶಂಸನೀಯ ಕೆಲಸವನ್ನು ಮಾಡಿದ್ದಾರೆ ಎಂದು ತೀರ್ಪುಗಾರರು ಹೇಳಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಬ್ಬರೂ ಪ್ರಶಸ್ತಿ ವಿಜೇತರಿಗೆ, ಡಿಸೆಂಬರ್ 28, 2025 ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ 'ಶಬ್ ಸಾಹಿತ್ಯ ಸಂಸ್ಥೆ'ಯ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದು. ಬೆಂಗಳೂರಿನ ಪ್ರಸಿದ್ದ ಸಮಾಜ ಸೇವಕ ಮತ್ತು ಅಜೇಯ ಸಾಹಿತ್ಯದ ತಜ್ಞ ಬಾಬುಲಾಲ್ ಗುಪ್ತಾ ಅವರ ಪ್ರತಿಷ್ಠಾನದ ಸೌಜನ್ಯದಿಂದ 'ಅಜೇಯ ಶಬ್ದ ಸೃಜನ್
ಸಮ್ಮಾನ್ ನೀಡಲಾಗುತ್ತದೆ. ಅದೇ ರೀತಿ, 'ದಕ್ಷಿಣ ಭಾರತ ಶಬ್ದ ಹಿಂದಿ ಸೇವೀ ಸಮ್ಮಾನ್ ಬೆಂಗಳೂರು ಮತ್ತು ಚೆನ್ನೈನಿಂದ ಪ್ರಕಟವಾಗುವ ಪ್ರಮುಖ ಹಿಂದಿ ಪತ್ರಿಕೆ ಗುಂಪು 'ದಕ್ಷಿಣ ಭಾರತ ರಾಷ್ಟ್ರಮತ್' ಸೌಜನ್ಯದಿಂದ ನೀಡಲಾಗುತ್ತದೆ.
ಈ ಪ್ರಶಸ್ತಿಗಳಿಗೆ ಒಟ್ಟು 35 ನಮೂದುಗಳನ್ನು ಸ್ವೀಕರಿಸಲಾಗಿದೆ. ಅವುಗಳನ್ನು ಸಮಗ್ರವಾಗಿ ಪರಿಗಣಿಸಿ, ಬಾಬುಲಾಲ್ ಗುಪ್ತಾ ಶ್ರೀಕಾಂತ್ ಪರಾಶರ್, ನಳಿನಿ ಪೋಪಟ್, ಡಾ. ಉಷಾರಾಣಿ ರಾವ್ ಮತ್ತು ಡಾ. ಶ್ರೀನಾರಾಯಣ್ ಸಮೀರ್ ಒಳಗೊಂಡ ತೀರ್ಪುಗಾರರು ಪ್ರಶಸ್ತಿ ವಿಜೇತರ ಹೆಸರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದಾಗಿ ಬೆಂಗಳೂರು ಶಬ್ದ ಸಾಹಿತ್ಯ ಸಂಸ್ಥೆ ಅಧ್ಯಕ್ಷ ಡಾ. ಶ್ರೀನಾರಾಯಣ ಸಮೀರ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa