ಉತ್ತರಕಾಶಿ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಪ್ರವಾಹ ಪೀಡಿತರಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ಮುಂದುವರಿದಿವೆ.
ಸಂತ್ರಸ್ತರಿಗೆ ಆಡಳಿತವು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಸುಮಾರು 150 ಜನರು ಪರಿಹಾರ ಶಿಬಿರಗಳಲ್ಲಿ ತಂಗಿದ್ದಾರೆ.
ದುರಂತದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ವರ್ಷದ ಬಾಲಕಿಯ ಮೃತದೇಹ ಪತ್ತೆಯಾದರೆ, ಚೆಪಾಡೊ ಗ್ರಾಮದ 78 ವರ್ಷದ ವೃದ್ಧರು ಇನ್ನೂ ನಾಪತ್ತೆಯಾಗಿದ್ದಾರೆ.
ಸಗ್ವಾಡ, ಥರಾಲಿ ಹಾಗೂ ಚೆಪಾಡೊ ಪ್ರದೇಶಗಳಲ್ಲಿ ಒಟ್ಟು 41 ಮನೆಗಳು ಹಾಗೂ 30 ಕ್ಕೂ ಹೆಚ್ಚು ಅಂಗಡಿಗಳು ಹಾನಿಗೊಳಗಾಗಿದ್ದು, 11 ವಾಹನಗಳು ನಾಶವಾಗಿವೆ.
ವಿದ್ಯುತ್ ಹಾಗೂ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು, ದೇವಲ್ ಮತ್ತು ಥರಾಲಿ ಬ್ಲಾಕ್‌ನ 60 ಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಛಪ್ರಾ-ಥರಾಲಿ ಪ್ರದೇಶದ 14 ಜಲ ಸಂಸ್ಥಾನದ ಯೋಜನೆಗಳು ಹಾನಿಗೊಳಗಾಗಿವೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ವತಃ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮಾಡುತ್ತಿದ್ದು, ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ, ಆರೋಗ್ಯ, ಜಲ ಸಂಸ್ಥಾನ, ಲೋಕೋಪಯೋಗಿ, ನೀರಾವರಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆರೋಗ್ಯ ಇಲಾಖೆಯ ವೈದ್ಯರು, ನರ್ಸ್‌ಗಳು, ತುರ್ತು ಔಷಧಿ ಹಾಗೂ ಆಂಬ್ಯುಲೆನ್ಸ್‌ಗಳೊಂದಿಗೆ ವೈದ್ಯಕೀಯ ತಂಡ ಕಾರ್ಯನಿರ್ವಹಿಸುತ್ತಿದೆ. ಹೆಲಿಕಾಪ್ಟರ್ ಹಾಗೂ ವಾಯುಪಡೆಯ ಎಂಐ-17 ಸಹ ಅಗತ್ಯವಿದ್ದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿದೆ.
ಥರಾಲಿಯ 10 ಕಿ.ಮೀ ವ್ಯಾಪ್ತಿಯೊಳಗೆ 12-15 ಸ್ಥಳಗಳಲ್ಲಿ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಕರ್ಣಪ್ರಯಾಗ್-ಥರಾಲಿ-ದೇವ ರಸ್ತೆ ಮುಚ್ಚಲಾಗಿದೆ. ರಸ್ತೆಯನ್ನು ತೆರೆಯಲು ತುರ್ತು ಕ್ರಮಗಳು ಕೈಗೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa