ಬೆಂಗಳೂರು, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಆಗಸ್ಟ್ 28ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಬೆಂಗಳೂರಿನ 35ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
ಇಡಿ 14 ದಿನಗಳ ವಶಕ್ಕೆ ಕೋರಿ ಮನವಿ ಸಲ್ಲಿಸಿದ್ದರೆ, ವೀರೇಂದ್ರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
ಇಡಿ ಪರ ವಕೀಲರು ಕೋಟ್ಯ0ತರ ನಗದು, ಕೆಜಿಗಳಷ್ಟು ಚಿನ್ನ ಪತ್ತೆಯಾಗಿರುವುದರ ಜೊತೆಗೆ ವಿದೇಶಿ ವ್ಯವಹಾರ, ಕ್ಯಾಸಿನೋ ಹಾಗೂ ಆನ್‍ಲೈನ್ ಬೆಟ್ಟಿಂಗ್ ವ್ಯವಹಾರಗಳಲ್ಲಿ ಶಾಸಕರ ಕುಟುಂಬದ ನಂಟು ಇದೆ. ಈ ಸಂಬಂಧ ವಿಚಾರಣೆ ನಡೆಸಲು ಸಮಯ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಎರಡು ಕಡೆ ವಾದ ಆಲಿಸಿದ ನ್ಯಾಯಾಧೀಶರು ಆಗಸ್ಟ್ ೨೮ರ ವರೆಗೆ ಇಡಿ ವಶಕ್ಕೆ ನೀಡಿ ಆದೇಶಿಸಿದರು.
ಇದಕ್ಕೂ ಮುನ್ನ ಆಗಸ್ಟ್ ೨೨ರಂದು ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು, ಹುಬ್ಬಳ್ಳಿ, ಗೋವಾ, ಮುಂಬೈ, ಜೋಧ್‌ಪುರ ಸೇರಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿತ್ತು.
ಶಾಸಕ ವೀರೇಂದ್ರ ಹಾಗೂ ಸಹೋದರ ಕೆ.ಸಿ. ತಿಪ್ಪೇಸ್ವಾಮಿ ಮನೆ ಮತ್ತು ಅವರ ಮಾಲೀಕತ್ವದ ಕಂಪನಿಗಳು, ಆನ್‍ಲೈನ್ ಗೇಮಿಂಗ್ ಆ್ಯಪ್‌ಗಳು ಹಾಗೂ ದುಬೈ ಮೂಲದ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಇದೀಗ ಇಡಿ ಅಧಿಕಾರಿಗಳು ಬೆಂಗಳೂರಿನ ಶಾಂತಿನಗರದ ಕಚೇರಿಗೆ ಕರೆ ತಂದಿದ್ದು, ಆನ್‍ಲೈನ್ ಗೇಮಿಂಗ್ ಆ್ಯಪ್‌ಗಳ ಮೂಲಕ ಅಕ್ರಮ ಹಣ ವರ್ಗಾವಣೆ, ವಿದೇಶಿ ವ್ಯವಹಾರಗಳಲ್ಲಿ ಅಕ್ರಮ ವಹಿವಾಟು ಹಾಗೂ ಅಕ್ರಮ ಆಸ್ತಿ ಗಳಿಕೆ ಕುರಿತು ಶಾಸಕರ ವಿಚಾರಣೆ ನಡೆಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa