ಮುಂಬಯಿ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತದ ಕ್ರಿಕೆಟ್ ತಂಡದ ಆಟಗಾರ ಚೇತೇಶ್ವರ ಪೂಜಾರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಈ ವರ್ಷ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಅವರ ಸರಣಿಗೆ ಪೂಜಾರರ ಹೆಸರು ಕೂಡ ಸೇರ್ಪಡೆಯಾಗಿದೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಭಾವುಕ ಸಂದೇಶ ಹಂಚಿಕೊಂಡಿರುವ ಪೂಜಾರ, ಟೀಂ ಇಂಡಿಯಾ ಜೆರ್ಸಿ ತೊಟ್ಟು ರಾಷ್ಟ್ರಗೀತೆ ಹಾಡುವುದು, ಪ್ರತಿ ಬಾರಿ ಮೈದಾನಕ್ಕಿಳಿದಾಗ ಶ್ರೇಷ್ಠ ಆಟ ನೀಡುವುದು, ಈ ಅನುಭವವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಎಲ್ಲ ಒಳ್ಳೇ ವಿಷಯಗಳಿಗೂ ಅಂತ್ಯವಿರುತ್ತದೆ. ಅದೇ ರೀತಿ ನಾನು ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತಿದ್ದೇನೆ. ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
ಭಾರತ ತಂಡದ ಪರ 103 ಟೆಸ್ಟ್ ಪಂದ್ಯಗಳಲ್ಲಿ 43.60 ಸರಾಸರಿಯಲ್ಲಿ 7,195 ರನ್ ಗಳಿಸಿರುವ ಪೂಜಾರ, 19 ಶತಕಗಳು ಹಾಗೂ 35 ಅರ್ಧಶತಕಗಳನ್ನು ಬಾರಿಸಿದ್ದಾರೆ. ಭಾರತದಲ್ಲಿ ನಡೆದ ಟೆಸ್ಟ್‌ಗಳಲ್ಲಿ ಒಟ್ಟು 3,839 ರನ್ ಗಳಿಸಿದ್ದು, ಸ್ವದೇಶ-ವಿದೇಶದ ಅನೇಕ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಕಳೆದ ಕೆಲವು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ಪೂಜಾರ ಅವರ ಈ ನಿರ್ಧಾರಕ್ಕೆ ಅದೇ ಕಾರಣವಾಗಿರಬಹುದು ಎಂದು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa