ಕಾಲ್ತುಳಿತ ಪ್ರಕರಣ : ಸರ್ಕಾರದ ತಪ್ಪಿಲ್ಲ-ಸಿದ್ದರಾಮಯ್ಯ
ಬೆಂಗಳೂರು, 22 ಆಗಸ್ಟ್ (ಹಿ.ಸ.) : ಆ್ಯಂಕರ್ : ಐಪಿಎಲ್ ಪಂದ್ಯದಲ್ಲಿ ಜಯಗಳಿಸಿದ ನಂತರ ಆರ್.ಸಿ.ಬಿ. ತಂಡದ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತವು ತಮ್ಮ ರಾಜಕೀಯ ಬದುಕಿನಲ್ಲೇ ಅತ್ಯಂತ ದುಃಖ ತಂದ ಘಟನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯ
Cm


ಬೆಂಗಳೂರು, 22 ಆಗಸ್ಟ್ (ಹಿ.ಸ.) :

ಆ್ಯಂಕರ್ : ಐಪಿಎಲ್ ಪಂದ್ಯದಲ್ಲಿ ಜಯಗಳಿಸಿದ ನಂತರ ಆರ್.ಸಿ.ಬಿ. ತಂಡದ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತವು ತಮ್ಮ ರಾಜಕೀಯ ಬದುಕಿನಲ್ಲೇ ಅತ್ಯಂತ ದುಃಖ ತಂದ ಘಟನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಭಾವುಕರಾದರು.

ವಿಧಾನ ಸಭೆ ಅಧಿವೇಶನದ ಕೊನೆ ದಿನವಾದ ಇಂದು ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ನೀಡಿದ ಅವರು,

ಘಟನೆಯಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.

ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ನ್ಯಾಯಾಂಗ ತನಿಖೆ ನಡೆಯುತ್ತಿದೆ ಎಂದರು.

ಪ್ರತಿಪಕ್ಷಗಳ ಸಾರ್ವಜನಿಕ ಕ್ಷಮಾಪಣೆ ಹಾಗೂ ರಾಜೀನಾಮೆ ಬೇಡಿಕೆಯನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ, ಹಿಂದೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಅನೇಕ ದುರಂತಗಳಲ್ಲಿ ಯಾವ ಮುಖ್ಯಮಂತ್ರಿ ಸಹ ರಾಜೀನಾಮೆ ನೀಡಿಲ್ಲ. ಆಗ ನೀವು ಕ್ಷಮೆ ಕೇಳಿರಲಿಲ್ಲ. ಹೀಗಿರುವಾಗ ನನ್ನ ರಾಜೀನಾಮೆ ಬೇಡುವುದು ತಾರ್ಕಿಕವಲ್ಲ ಎಂದು ತಿರುಗೇಟು ನೀಡಿದರು.

ಘಟನೆಯ ದಿನ ಬೆಂಗಳೂರಿನ ಜನಾರ್ದನ ಹೋಟೆಲ್‌ಗೆ ತಿಂಡಿ ತಿನ್ನಲು ಹೋದ ವಿಚಾರವನ್ನು ಒಪ್ಪಿಕೊಂಡ ಮುಖ್ಯಮಂತ್ರಿ, ಆಗ ಸಂಜೆ 5:30ರವರೆಗೆ ಸಾವಿನ ಸುದ್ದಿ ನನಗೆ ತಿಳಿದಿರಲಿಲ್ಲ ಎಂದರು.

ದುರಂತವನ್ನು ರಾಜಕೀಯಗೊಳಿಸಬೇಡಿ, ಸರ್ಕಾರ ತನ್ನ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಮುಖ್ಯಮಂತ್ರಿ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮುಖ್ಯಮಂತ್ರಿ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿ ಸಭಾತ್ಯಾಗ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande