ಬಳ್ಳಾರಿ, 02 ಆಗಸ್ಟ್ (ಹಿ.ಸ.) :
ಆ್ಯಂಕರ್ : ಅಕ್ಷರಸ್ಥರಲ್ಲೂ ಮತ್ತು ವಿದ್ಯಾವಂತರಲ್ಲೂ ಸಾಕಷ್ಟು ಬೌದ್ಧಿಕ ವ್ಯತ್ಯಾಸಗಳು, ಜೀವನ ಕ್ರಮಗಳು ಮತ್ತು ವೈಚಾರಿಕ ಭಿನ್ನತೆಗಳು ಇರುವುದು ಸಹಜ ಎಂದು ನಿವೃತ್ತ ಶಿಕ್ಷಕಿ ಎಸ್.ಎಂ. ಜಯಶ್ರೀ ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕಪ್ಪಗಲ್ಲಿನ ಶಾರದಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ
317ನೇ ಮಹಾಮನೆ `ಲಿಂ. ಸಂಗನಕಲ್ಲು ದೊಡ್ಡಶರಣಪ್ಪ ಹಂಪಮ್ಮ ದತ್ತಿ'ಯಲ್ಲಿ `ಶರಣರ ವಚನಗಳಲ್ಲಿ ವೈಚಾರಿಕತೆ' ವಿಷಯದ ಕುರಿತು ಮಾತನಾಡಿದರು.
ಬುದ್ದಿವಂತರು ಬದುಕನ್ನು ಕಟ್ಟಿಕೊಂಡರೆ, ವಿವೇಕಶಾಲಿಗಳು ಬದುಕಿನ ಜೊತೆ ಬಾಂಧವ್ಯವನ್ನು ಬೆಳಸಿಕೊಳ್ಳುತ್ತಾರೆ.
ಅಕ್ಷರ ವಿದ್ಯೆಗಿಂತ ವೈಚಾರಿಕತೆಯು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ. ಶರಣರ ವಿಚಾರಗಳೆಲ್ಲ ವೈಚಾರಿಕತೆಯ ನಿಧಿಯಾಗಿವೆ ಎಂದರು.
ಶರಣರ ವಚನಗಳು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಉಜ್ವಲಗೊಳಿಸುವ ಸಾಮಥ್ರ್ಯವನ್ನು ಹೊಂದಿವೆ. ಪ್ರತಿಯೊಬ್ಬರ ನಡೆ-ನುಡಿ, ಆಚಾರ-ವಿಚಾರಗಳ ನೈತಿಕತೆ, ಧಾರ್ಮಿಕ - ಆಧ್ಯಾತ್ಮಿಕ ವಿಕಾಸವನ್ನು ವ್ಯಕ್ತಿಯಲ್ಲಿ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ ಎಂದರು.
ಸುನೀತಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ. ಪರಮೇಶ್ವರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,
ಕೇವಲ ಜ್ಞಾನ, ಬುದ್ದಿವಂತಿಕೆ ನಮ್ಮೆಲ್ಲರ ಧ್ಯೇಯ ಸಾಧನೆಗಳಲ್ಲ. ವೈಚಾರಿಕತೆ ಮಾತ್ರ ನಮ್ಮೆಲ್ಲರನ್ನು ಮುನ್ನಡೆಸಬಹುದು ಎಂದರು.
ಶಾಲೆಯ ಪ್ರಾಂಶುಪಾಲ ಟಿ. ನೇತ್ರಪ್ರಸನ್ನ ಅವರು ಅಧ್ಯಕ್ಷತೆವಹಿಸಿದ್ದರು. ಸುನೀತಾ ಶಿಕ್ಷಣ ಸಂಸ್ಥೆಯ ಖಜಾಂಚಿ ಕೆ.ಎಸ್. ನೀಲಗಂಗಮ್ಮ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಗೌರಿ ತ್ರಿವೇಣಿ ವಚನ ಪ್ರಾರ್ಥನೆ ಮಾಡಿದರು. ಸುಕನ್ಯ.ಕೆ ಸ್ವಾಗತ ಕೋರಿದರು.
ದತ್ತಿ ದಾಸೋಹಿಗಳಾದ ಎಸ್. ಚನ್ನನಗೌಡ - ಮಹಾದೇವಿ ದಂಪತಿ ವೇದಿಕೆಯಲ್ಲಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಕೆ.ಬಿ. ಸಿದ್ಧಲಿಂಗಪ್ಪ ಪ್ರಾಸ್ತಾವಿಕ ಭಾಷಣ ಮಾಡಿ, ದತ್ತಿ ದಾನಿಗಳು - ದಾಸೋಹಿಗಳನ್ನು ಸಭೆಗೆ ಪರಿಚಯಿಸಿದರು. ಬಿ.ಎಂ.ಅಮೃತ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಪೆನ್ನು ಗಳನ್ನು ವಿತರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್