ಗದಗ, 02 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗ್ರಾಮಸ್ವರಾಜ ಪರಿಕಲ್ಪನೆ ಗಾಂಧೀಜಿಯವರ ಕನಸಾಗಿತ್ತು. ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರ್ಕಾರಗಳಾಗಬೇಕು. ಅಲ್ಲಿ ವಾಸಿಸುವವರ ಬದುಕಿನ ಗುಣಮಟ್ಟ ಉನ್ನತಮಟ್ಟದ್ದಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಗದಗ ನಗರದ ಕೆ.ಎಚ್.ಪಾಟೀಲ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಕೆ.ಎಚ್.ಪಾಟೀಲ ಪ್ರತಿಷ್ಟಾನ ಹಾಗೂ ವಿವೇಕ ಪಥ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ ಹಾಗೂ ವಿವೇಕ ಪಥ ಅನುಷ್ಟಾನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ವ್ಯವಸ್ಥೆಯು ಸುಭದ್ರಗೊಳಿಸಲು ಗ್ರಾಮ ಸ್ವರಾಜ ಕಾನೂನುಗಳನ್ನು ಮಾಡಲಾಗಿದೆ. ಅವುಗಳ ಅನುಷ್ಟಾನ ಸ್ಥಳೀಯ ಮಟ್ಟದಿಂದ ಜಾರಿಗೊಳಿಸುವ ಮೂಲಕ ಗ್ರಾಮ ಪಂಚಾಯತ್‌ಗಳು ಸರ್ಕಾರಗಳಂತೆ ಕಾರ್ಯನಿರ್ವಹಿಸಬೇಕಿದೆ ಎಂದರು.
ಗದಗ ಜಿಲ್ಲೆ ಒಂದು ರೀತಿಯಲ್ಲಿ ಪ್ರಯೋಗಶಾಲೆ ಇದ್ದಂತೆ. ಎಲ್ಲ ಯೋಜನೆಗಳ ಆರಂಭ ಅನುಷ್ಟಾನ ಜಿಲ್ಲೆಯ ಮೂಲಕವೇ ಆರಂಭಗೊಳ್ಳುತ್ತದೆ. ಅದೇ ರೀತಿ ಗ್ರಾಮ ಸ್ವರಾಜ ಕಾನೂನು ಸಹ ಜಿಲ್ಲೆಯಿಂದಲೇ ಸರಿಯಾಗಿ ಅನುಷ್ಟಾನ ಆಗಲಿ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಡವರ ಬದುಕು ಸುಸ್ಥಿರಗೊಳಿಸಿದೆ. ಕುಟುಂಬದ ಸುಭದ್ರ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆಯಲ್ಲದೇ ರಾಜ್ಯದಲ್ಲಿನ ಬಡತನ ನಿವಾರಣೆಯಾಗಿದೆ. ಪಂಚ ಗ್ಯಾರಂಟಿಗಳ ಮೂಲಕ ಬಡತನವನ್ನು ಬೇರು ಸಮೇತ ಕರ್ನಾಟಕ ರಾಜ್ಯದಲ್ಲಿ ಕಿತ್ತೊಗೆಯಲಾಗಿದೆ. ಜಿಲ್ಲೆ ಪಂಚ ಗ್ಯಾರಂಟಿ ಅನುಷ್ಟಾನದಲ್ಲಿ ಅರ್ಹರಿಗೆ ಯೋಜನೆಗಳನ್ನು ಹೆಚ್ಚು ಹೆಚ್ಚು ತಲುಪಿಸುವ ಮೂಲಕ ಪ್ರಥಮ ಸ್ಥಾನದಲ್ಲಿ ಇದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಮಾನ್ಯ ಮುಖ್ಯಮಂತ್ರಿಗಳು ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಶಾಸಕರ ಸಭೆ ಜರುಗಿಸಿದರು. ಜಿಲ್ಲೆಗೆ ಅಗತ್ಯವಿರುವ ಅನುದಾನ, ಯೋಜನೆಗಳ ಕುರಿತಂತೆ ಸುದೀರ್ಘ ಚರ್ಚೆಯನ್ನು ನಡೆಸಲಾಯಿತು. ಈ ವೇಳೆ ಶಾಸಕರಾದ ಜಿ.ಎಸ್.ಪಾಟೀಲರು ನಮ್ಮೊಂದಿಗಿದ್ದರು. ಗದಗ ಜಿಲ್ಲೆಯ ಸರ್ಕಾರಿ ಶಾಲೆಗಳ ಶೌಚಾಲಯಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಯೋಜನೆ ರೂಪಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿ ಶೌಚಾಲಯಗಳ ನಿರ್ಮಾಣ ಹಾಗೂ ದುರಸ್ತಗಾಗಿ 50 ಕೋಟಿ ಅನುದಾನ ಜಿಲ್ಲೆಗೆ ನೀಡುವಂತೆ ಕೋರಲಾಗಿದೆ ಎಂದರು.
ಯಾವುದೇ ಒಂದು ಯೋಜನೆಯನ್ನು ಶಿಸ್ತು ಬದ್ಧವಾಗಿ ರೂಪಸಿ ಅನುಷ್ಟಾನಗೊಳಿಸಿದರೆ ಯಾವುದೂ ಅಸಾಧ್ಯವಲ್ಲ. ಇದಕ್ಕೆ ನೈಜ ಉದಾಹರಣೆ ಶುದ್ಧ ಕುಡಿಯುವ ನೀರಿನ ಯೋಜನೆಯಾಗಿದೆ. ಅದೇ ತರಹ ಗ್ರಾಮ ಸ್ವರಾಜ ಕಾನೂನು ಶೇ 100 ರಷ್ಟು ಅನುಷ್ಟಾನ ಆಗಲಿ. ಪ್ರಭುವಿನೆಡೆಗೆ ಪ್ರಭುತ್ವ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಲು ಚಿಂತನೆ ನಡೆದಿದ್ದು ಅಗಸ್ಟ 15 ರಿಂದ ಆರಂಭಗೊಳಿಸಲಾಗುವುದು ಎಂದರು. ಜಿಲ್ಲೆಯ ಗ್ರಾಮಗಳು ವ್ಯಸನಮುಕ್ತ, ವ್ಯಾಜ್ಯಮುಕ್ತ, ಬಹಿರ್ದೆಸೆ ಮುಕ್ತವಾಗಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಿ ಯಶಸ್ವಿಯಾಗೋಣ ಎಂದು ಸಚಿವ ಎಚ್.ಕೆ.ಪಾಟೀಲ ಕರೆ ನೀಡಿದರು.
ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ ಸಹಕಾರಿ ಭೀಷ್ಮ ಕೆ.ಎಚ್.ಪಾಟೀಲರು ಸಚಿವರಾಗುವವರೆಗೂ ಗ್ರಾಮದ ಸರಪಂಚರಾಗಿ ನಿರಂತರವಾಗಿ ಹಲವು ವರ್ಷಗಳವರೆಗೆ ಕಾರ್ಯನಿರ್ವಹಿಸಿ ಗ್ರಾಮಗಳ ಅಭಿವೃದ್ಧಿಗೋಸ್ಕರ ಶ್ರಮಿಸಿದ್ದಾರೆ. ಗ್ರಾಮಸ್ವರಾಜ ಕಾನೂನನ್ನು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಟಾನಗೊಳಿಸೋಣ. ವಾರ್ಡ ಹಾಗೂ ಗ್ರಾಮ ಸಭೆಗಳನ್ನು ಅಗಸ್ಟ 15 ರೊಳಗಾಗಿ ನಡೆಸಿ ಗ್ರಾಮ ಪಂಚಾಯತ್ ಹಾಗೂ ನಗರಸಭೆಗಳಿಗೆ ವರದಿ ಕಳುಹಿಸಬೇಕು. ನಂತರ ಅಲ್ಲಿಂದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದರು. ನಾವೆಲ್ಲರೂ ಇಂದು ನಮ್ಮ ಗ್ರಾಮಗಳ ಶಾಲೆಗಳ ಶೌಚಾಲಯ ದುರಸ್ತಿಗಳನ್ನು ಅಚ್ಚುಕಟ್ಟಾಗಿ ಅಕ್ಟೋಬರ್ 2 ರೊಳಗಾಗಿ ಪೂರ್ಣಗೊಳಿಸುತ್ತೇವೆಂದು ದೃಢನಿರ್ಧಾರ ಕೈಗೊಳ್ಳೋಣ ಎಂದರು.
ಸಹಕಾರ ರೇಡಿಯೋ ನಿಲಯ ನಿರ್ದೇಶಕ ಜೆ.ಕೆ. ಜಮಾದಾರ ಅವರು ಗಾಂಧೀಜಿ ಕನಸಿನ ಗ್ರಾಮ ಸ್ವರಾಜ ಹಾಗೂ ವಿವೇಕ ಪಥದ ಉದ್ದೇಶ ಹಾಗೂ ಆಶಯಗಳನ್ನು ವಿವರವಾಗಿ ತಿಳಿಸಿಕೊಟ್ಟರು.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಗ್ಯಾರಂಟಿ ಯೋಜನೆಗಳ ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ವಾಸಣ್ಣ ಕುರಡಗಿ, ಗುರಣ್ಣ ಬಳಗಾನೂರ, ವಿದ್ಯಾದರ ದೊಡ್ಡಮನಿ, ನೀಲಮ್ಮ ಬೋಳನವರ, ವೀರಣ್ನ ಹುಣಸಿಕಟ್ಟಿ, ಸಿದ್ಧಲಿಂಗೇಶ್ವರ ಪಾಟೀಲ, ಕೃಷ್ಣಗೌಡ ಪಾಟೀಲ, ಅಬ್ದುಲ್ ಕರೀಂ ಸಾಬ, ಶಕುಂತಲಾ ಅಕ್ಕಿ, ಎ.ಎನ್. ನಾಗರಹಳ್ಳಿ, ಎಂ.ಎ.ರಡ್ಡೇರ, ತಾಲೂಕು ಕಾರ್ಯನಿರ್ವಹಣಾದಿಕಾರಿ ಮಲ್ಲಯ್ಯ ಕೆ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹಿರಾಲಾಲ ಜಿನಗಾ ಸೇರಿದಂತೆ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP