ವಿಜಯಪುರ, 02 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ವಿವಿಧ ಇಲಾಖೆಯಡಿ ಒದಗಿಸುವ ಯೋಜನೆಗಳ ಲಾಭವನ್ನು ಅರ್ಹ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪರಿಶೀಲನಾ ಸಮಿತಿಯ ಪ್ರಥಮ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳಬೇಕು. ಅಲ್ಪಸಂಖ್ಯಾತ ಮಕ್ಕಳ ಶೈಕ್ಷಣಿಕ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಿ, ಮನೆ-ಮನೆಗೆ ಹೋಗಿ ನೊಂದಣಿ ಮಾಡುವ ಮೂಲಕ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆಯಡಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಕಟ್ಟಡಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಬೇಕು. ಬಾಡಿಗೆ ಕಟ್ಟಡ ಅವಶ್ಯವಿದ್ದಲ್ಲಿ ಮಾಹಿತಿ ಒದಗಿಸಿ ಅಂಗನವಾಡಿ ಕಟ್ಟಡ ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಮೂಲಕ ಶಾಲಾ ಶಿಕ್ಷಣದಲ್ಲಿ ಸುಧಾರಣೆ ತರಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಉರ್ದು ಶಾಲೆಗಳಲ್ಲಿ ಕೊಠಡಿಗಳು- ಶಿಕ್ಷಕರ ಕೊರತೆ ಸೇರಿದಂತೆ ವಿವಿಧ ಕೊರತೆಗಳನ್ನು ನಿವಾರಿಸಿಕೊಂಡು ಮಕ್ಕಳ ಶಿಕ್ಷಣಕ್ಕೆ ಗಮನ ಹರಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವರ್ಗಗಳಿಗೆ ಪರಿಹಾರ ಬೋಧನೆ ಮಾಡಬೇಕು. ಫಲಿತಾಂಶದಲ್ಲಿ ಪ್ರತಿಶತ ಹೆಚ್ಚಿಸಲು ಮುಖ್ಯವಾಗಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ, ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಪ್ರಾಥಮಿಕ ಹಂತದಲ್ಲಿಯೇ 5ನೇ ತರಗತಿಯಿಂದಲೇ ಶಿಕ್ಷಣಕ್ಕೆ ಒತ್ತು ನೀಡಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಸರ್ಕಾರ ಹಲವಾರು ಯೋಜನೆಗಳನ್ನು ಶಿಕ್ಷಣಕ್ಕಾಗಿ ಜಾರಿಗೊಳಿಸಿದೆ. ಶಿಕ್ಷಣ ಗುಣಮಟ್ಟಕ್ಕೆ ಒತ್ತು ನೀಡಲಾಗುತ್ತಿದೆ. ಅಗತ್ಯ ಮೂಲಭೂತ ಸೌಲಭ್ಯ, ಶಿಕ್ಷಕರ ನಿಯೋಜನೆ, ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದರೂ ಸಹ ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಹಿಂದೇಟು ಹಾಕುತ್ತಿರುವುದೇಕೆÉ ಎಂಬುದನ್ನು ಪತ್ತೆ ಹಚ್ಚಬೇಕು. ಇದರಿಂದ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯಾವ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆ ಅಂತಹ ಶಾಲೆಗಳ ದಾಖಲಾತಿ ಕಡಿಮೆಯಾಗಲು ಇರುವ ಮೂಲಕ ಕಾರಣವನ್ನು ಡಿಆರ್‍ಪಿ ಸಿಆರ್‍ಪಿ ಮೂಲಕ ಕಂಡು ಹಿಡಿಯಬೇಕು. ಮಕ್ಕಳ ಶಿಕ್ಷಣ ಹೆಚ್ಚಿಸುವಲ್ಲಿ ಪಾಲಕರು, ಶಿಕ್ಷಕರು, ಸಮುದಾಯ ಸಹಭಾಗಿತ್ವ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸಿ, ಅಲ್ಪಸಂಖ್ಯಾತ ಸಮುದಾಯ ಜನ ಇರುವಲ್ಲಿ ತಿಳುವಳಿಕೆ ನೀಡಿ, ಶಾಲಾ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಬೇಕು. ಕ್ರೀಯಾಯಶೀಲತೆಯಿಂದ ಕಾರ್ಯನಿರ್ವಹಿಸಿ ಶೈಕ್ಷಣಕ ಗುಣಮಟ್ಟ ಹೆಚ್ಚಿಸಲು ಅಗತ್ಯ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುವಂತೆ ಅವರು ಸೂಚನೆ ನೀಡಿದರು.
ಅನುದಾನಿತ ಶಾಲೆಗಳಲ್ಲಿ ಕಳಪೆ ಫಲಿತಾಂಶ ಬಂದಿದೆ. ಈ ಕುರಿತು ವಿಶೇಷ ತನಿಖಾ ವರದಿ ತಯಾರಿಸಿ ಸಲ್ಲಿಸಬೇಕು. ಸರ್ಕಾರಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು ಸೇರಿದಂತೆ ಶಾಲೆಯ ಮುಖ್ಯೊಪಾಧ್ಯಾಯರಿಗೆ ಡಟಯ್ ಮೂಲಕ ತರಬೇತಿ ನೀಡಬೇಕು. ಶಾಲೆಗಳಲ್ಲಿ ಅಲ್ಪಸಂಖ್ಯಾತ ಮಕ್ಕಳ ದಾಖಲಾತಿ ಹೆಚ್ಚಿಸಲು ಶಾಲೆ ಮುಖ್ಯೋಪಾಧ್ಯಾಯರು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ವ್ಯವಸ್ಥಿತ ಶಿಕ್ಷಣ ವ್ಯವಸ್ಥೆ ಒದಗಿಸಲು ಕ್ರಮ ವಹಿಸಬೇಕು. ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ವಿದ್ಯಾರ್ಥಿವೇತನ ಸೌಲಭ್ಯ ಪಡೆದುಕೊಳ್ಳಲು ಸೂಕ್ತ ಮಾಹಿತಿ ಒದಗಿಸಬೇಕು. ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ನಂತರ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿಸಿಕೊಳ್ಳದೇ ಅನುದಾನಕ್ಕನುಸಾರವಾಗಿ ವಿದ್ಯಾರ್ಥಿವೇತನ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಆರ್ಥಿಕ ಸ್ವಾವಲಂಬನೆ ಸಾಧಿಸಲು ಶೇ.15 ರಷ್ಟು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸಾಲ-ಸೌಲಭ್ಯ ಒದಗಿಸುವ ಮೂಲಕ ನಿಗದಿತ ಗುರಿ ಸಾಧನೆಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದ ಅವರು, ಅಲ್ಪಸಂಖ್ಯಾತ ನಿಗಮದಿಂದ ಅನುಷ್ಠಾನಗೊಳಿಸುವ ಅರಿವು ಶೈಕ್ಷಣಿಕ ಸಾಲ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಉದ್ಯೋಗ ಮೇಳಗಳನ್ನು ಆಯೋಜಿಸಿ ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಎಸ್ ಪಾಟೀಲ, ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾದ ಬಸೀರಅಹ್ಮದ ರಿಸಾಲದಾರ, ಎಸ್.ಎಸ್.ತಾಜೀಮತರಕ್, ನೆಲಸನ್ ನೊರಮನ್ ಐಝಾಕ್ಸ್, ಜ್ಯೋತಿಂದ್ರ ಹಣಮಂತ ಆಯತವಾಡ, ಬಂದೇನವಾಜ ಮುಲ್ಲಾ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದಶಕರಾದ ಶ್ರೀಮತಿ ಟಿ.ಎಚ್.ಕೊಲ್ಹಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande