ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು -ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು -ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
ಕೋಲಾರದಲ್ಲಿ ನಡೆದ ಡಾ. ಮಹಂತೇಶ್ ಶಿವಯೋಗಿಗಳ ಜನ್ಮ ಜಯಂತಿಯಲ್ಲಿ ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ನಮನ ಸಲ್ಲಿಸಿದರು.


ಕೋಲಾರ, 0೨ ಆಗಸ್ಟ್ (ಹಿ.ಸ) :

ಆ್ಯಂಕರ್ : ತಮ್ಮ ಜೀವನದುದ್ದಕ್ಕೂ ಸರಳತೆ, ಶಿಸ್ತು ಮತ್ತು ಸಂಯಮದ ಪಾಠವನ್ನು ಸಾರಿದರು. ಅವರ ಜೀವನವೇ ನಮಗೆ ದೊಡ್ಡ ಸಂದೇಶ. ಅಂತಹ ಮಹಾನ್ ಚೇತನದ ಜನ್ಮದಿನದಂದು, ಯುವಜನತೆ ಒಂದು ದೃಢ ಸಂಕಲ್ಪ ಮಾಡಬೇಕಿದೆ. ವ್ಯಸನವೆಂಬ ಈ ಸಾಮಾಜಿಕ ಪಿಡುಗನ್ನು ಬೇರುಸಹಿತ ಕಿತ್ತೊಗೆಯುವ ನಿರ್ಧಾರ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದರು

ಕೋಲಾರದ ಟಿ.ಚೆನ್ನಯ್ಯ ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಡಾ.ಮಹಾಂತ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿನ ದುಶ್ಚಟಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.

ಯುವ ಜನತೆ ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಆಧುನಿಕತೆ ಹೆಚ್ಚಾದಂತೆ ವಿವೇಚನಾಶಕ್ತಿ ಬೆಳೆಯುತ್ತಿದೆ ಆದರೆ ಯುವ ಜನತೆ ಹೆಚ್ಚು ದುಶ್ಚಟಗಳಿಗೆ ದಾಸರಾಗುತ್ತ್ತಿರುವುದು ಕಳವಳಕಾರಿಯಾಗಿದೆ. ಪ್ರಸ್ತುತ ಸಮಾಜಕ್ಕೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಅತ್ಯವಶ್ಯಕವಾಗಿದ್ದು, ಮಧ್ಯಪಾನ, ಧೂಮಪಾನ, ಮಾದಕ ವಸ್ತುಗಳ ಬಳಕೆ ಹಾಗೂ ಮೊಬೈಲ್ ವ್ಯಸನಗೊಳಗಾಗುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ವಿದ್ಯಾರ್ಥಿಗಳು ಇಂತಹ ವ್ಯಸನಗಳಿಗೆ ಒಳಗಾಗದೇ ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್ ಪಿ.ಬಾಗೇವಾಡಿ ಮಾತನಾಡಿ, ಇಂದು ನಾವು ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತರಾದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನವನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸುತ್ತಿರುವುದು ನಿಜಕ್ಕೂ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.

ಮಹಾAತ ಶಿವಯೋಗಿಗಳು ತಮ್ಮ ಇಡೀ ಜೀವನವನ್ನು ಸಮಾಜದ ಒಳಿತಿಗಾಗಿ, ಜನರ ಉದ್ದಾರಕ್ಕಾಗಿ ಮುಡಿಪಾಗಿಟ್ಟವರು. ಅವರು ಪ್ರತಿ ಮನೆಗೂ ತೆರಳಿ, ಅವರ ಜೋಳಿಗೆ ಚಾಚಿ ಈ ಜೋಳಿಗೆಗೆ ನಿಮ್ಮ ದುಡ್ಡನ್ನಲ್ಲ, ನಿಮ್ಮ ದುಶ್ಚಟಗಳನ್ನು ಹಾಕಿ ಎಂದು ಹೇಳಿದವರು. ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ನಂಬಿದ್ದರು. ಅವರ ದೃಷ್ಟಿಯಲ್ಲಿ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವಲ್ಲ. ಅದು ಮಾನಸಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆರೋಗ್ಯವಾಗಿತ್ತು.

ವ್ಯಸನ ಎಂಬ ಪದ ಕೇಳಿದ ತಕ್ಷಣ ನಮಗೆ ನೆನಪಾಗುವುದು ತಂಬಾಕು, ಮದ್ಯಪಾನ, ಡ್ರಗ್ಸ್ ನಂತಹ ಮಾದಕ ವಸ್ತುಗಳು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ವ್ಯಸನಗಳ ಸ್ವರೂಪ ಬದಲಾಗಿದೆ. ಆನ್‌ಲೈನ್ ಗೇಮಿಂಗ್, ಜೂಜು, ಮೊಬೈಲ್ ಬಳಕೆ ಮುಂತಾದ ಡಿಜಿಟಲ್ ವ್ಯಸನಗಳೂ ಸಹ ನಮ್ಮ ಯುವಜನತೆಯನ್ನು ಆವರಿಸುತ್ತಿವೆ. ಈ ಎಲ್ಲಾ ವ್ಯಸನಗಳು ಒಂದು ರೀತಿಯಲ್ಲಿ ಗೆದ್ದಲು ಹುಳದಂತೆ. ಸಣ್ಣ ಮಕ್ಕಳಿಂದ ದೊಡ್ಡ ವ್ಯಕ್ತಿಯವರೆಗೆ, ಅವನ ಕುಟುಂಬವನ್ನು ಮತ್ತು ಇಡೀ ಸಮಾಜವನ್ನು ಒಳಗಿನಿಂದಲೇ ತಿಂದುಹಾಕುತ್ತವೆ ಎಂದು ಹೇಳಿದರು.

ಒಬ್ಬ ವ್ಯಸನಿ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ಶಿಕ್ಷಣ, ಉದ್ಯೋಗ, ಗುರಿ ಎಲ್ಲವನ್ನೂ ಮರೆತು, ಬದುಕಿನ ಅಮೂಲ್ಯ ಸಮಯವನ್ನು ವ್ಯರ್ಥಮಾಡಿಕೊಳ್ಳುತ್ತಾನೆ. ಆತ್ಮವಿಶ್ವಾಸ ಕಳೆದುಕೊಂಡು ಖಿನ್ನತೆಗೆ ಜಾರುತ್ತಾನೆ. ಒಂದು ಕುಟುಂಬದಲ್ಲಿ ಒಬ್ಬ ವ್ಯಸನಿ ಇದ್ದರೆ, ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಆರ್ಥಿಕ ಸಂಕಷ್ಟ, ಕೌಟುಂಬಿಕ ಕಲಹ, ಹಿಂಸೆ ಹೆಚ್ಚಾಗಿ ಸಂಬAಧಗಳು ಮುರಿದು ಬೀಳುತ್ತವೆ. ಯಾವುದೇ ಅತೀ ಆದರೆ ಅದು ವ್ಯಸನವಾಗುತ್ತದೆ. ಅದು ಹೆಣ್ಣು, ಹೊನ್ನು ಅಥವಾ ಮಣ್ಣು ಆಗಿರಬಹುದು.

ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದ್ದು, ನಮ್ಮದು ಯುವ ದೇಶ. ಆದರೆ ಬೇರೆ ದೇಶಗಳು ನಮ್ಮ ದೇಶದ ಮೇಲೆ ನ್ಯೂಕ್ಲಿಯರ್ ಬಾಂಬ್‍ಗಳAತಹ ಪ್ರಯೋಗ ಮಾಡಬೇಕಾಗಿಲ್ಲ. ಇಂತಹ ಮಾದಕ ದ್ರವ್ಯಗಳನ್ನು ದೇಶದ ತುಂಬಾ ಹರಡಿದರೆ ಸಾಕು, ಇಡೀ ದೇಶವೇ ಹಾಳಾಗುತ್ತದೆ. ಆದ್ದರಿಂದ ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಸಾಧನೆಯ ಹಾದಿ ಹಿಡಿಯಬೇಕು. ನಮ್ಮ ದೇಹ, ಮೆದುಳು ಮತ್ತು ಮನಸ್ಸು ಆರೋಗ್ಯವಾಗಿದ್ದಾಗ ಮಾತ್ರ ನಾವು ದೇಶಕ್ಕೆ ಉತ್ತಮ ಕೊಡುಗೆ ನೀಡಬಹುದು. ಪೋಷಕರು ತಮ್ಮ ಮಕ್ಕಳೊಂದಿಗೆ ಬೆರೆತು, ಅವರು ಕೆಟ್ಟ ಚಟಗಳಿಗೆ ಬಲಿಯಾಗದ ಹಾಗೆ ನೋಡಿಕೊಳ್ಳುವುದು ಅವರ ಪ್ರಮುಖ ಜವಾಬ್ದಾರಿಯಾಗಿದೆ.

ಆರೋಗ್ಯವಂತ ವ್ಯಕ್ತಿಯಿಂದ ಆರೋಗ್ಯವಂತ ಸಮಾಜ, ಆರೋಗ್ಯವಂತ ಸಮಾಜದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ನಮ್ಮ ಯೋಚನಾ ವಿಧಾನ ಬದಲಾಗಬೇಕಿದೆ. ಸಮಾಜವನ್ನು ಬದಲಿಸುವ ಶಕ್ತಿ ನಮ್ಮಲ್ಲಿದೆ. ಅದನ್ನು ಸರಿಯಾದ ದಾರಿಯಲ್ಲಿ ಬಳಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ವಾರ್ತಾ ಸಹಾಯಕರಾದ ಮಂಜೇಶ್ ಮಾತನಾಡಿ, ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ನೆನಪಿಗಾಗಿ ವ್ಯಸನಮುಕ್ತ ದಿನಾಚರಣೆ ಆಚರಿಸಲಾಗುತ್ತಿದೆ. ಡಾ. ಮಹಾಂತ ಶಿವಯೋಗಿಗಳು, ೧೯೩೦ರ ಆಗಸ್ಟ್ ೧ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದರು. ತಮ್ಮ ಕೇವಲ ೧೦ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದ ಇವರು, ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ ಮತ್ತು ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಪಡೆದರು. ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಬಂದಾಗ, ಕಾಶಿಯಿಂದ ಹಿಂದಿರುಗಿ ನೂರಾರು ಹಳ್ಳಿಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆದು ದಾಸೋಹ ನಡೆಸಿದರು. ಜೊತೆಗೆ ಗೋಶಾಲೆಗಳನ್ನು ಆರಂಭಿಸಿ ಜಾನುವಾರುಗಳಿಗೆ ನೆರವಾದರು ಎಂದರು.

೧೯೭೦ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಕಾರಿಯಾದ ನಂತರ, ೪೮ ವರ್ಷಗಳ ಕಾಲ ಸಮಾಜದ ಏಳಿಗೆಗಾಗಿ ದುಡಿದರು. ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ ಸ್ಥಾಪನೆ, ನಿರುದ್ಯೋಗಿಗಳು ಮತ್ತು ವಿಧವೆಯರಿಗಾಗಿ ಕಾಯಕ ಸಂಜೀವಿನಿ ಸಂಸ್ಥೆ, ಹಾಗೂ ನಿಸರ್ಗ ಚಿಕಿತ್ಸೆ-ಯೋಗ ಕೇಂದ್ರಗಳAತಹ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದರು. ವಿಶೇಷವಾಗಿ, ಹಿಂದುಳಿದ ವರ್ಗಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು ಮತ್ತು ಮಹಿಳೆಯರಿಗೂ ಮಠಾಧಿಕಾರ ಪಟ್ಟ ನೀಡಿದ್ದು ಅವರ ವಿಶಾಲ ಮನೋಭಾವಕ್ಕೆ ಸಾಕ್ಷಿಯಾಘಿದೆ.

ಮಹಾಂತ ಜೋಳಿಗೆ ಮತ್ತು ವ್ಯಸನ ಮುಕ್ತ ಸಮಾಜದ ಕನಸು: ಡಾ. ಮಹಾಂತ ಶಿವಯೋಗಿಗಳ ಅತಿದೊಡ್ಡ ಕೊಡುಗೆ ಎಂದರೆ ‘ಮಹಾಂತ ಜೋಳಿಗೆ' ಕಾರ್ಯಕ್ರಮ. ೧೯೭೫ರಲ್ಲಿ, ಕುಡಿತದ ಚಟದಿಂದ ಮೃತಪಟ್ಟ ಯುವಕನ ಕುಟುಂಬದ ದುಃಸ್ಥಿತಿಯನ್ನು ನೋಡಿ, ಈ ಕಾರ್ಯಕ್ರಮವನ್ನು ಆರಂಭಿಸಿದರು. ಕುಡಿತ ಮತ್ತು ಇತರ ದುಶ್ಚಟಗಳಿಂದ ಸಾವಿರಾರು ಕುಟುಂಬಗಳು ಹಾಳಾಗುತ್ತಿರುವುದನ್ನು ಅರಿತು, ಅವುಗಳಿಂದ ಜನರನ್ನು ಮುಕ್ತಿಗೊಳಿಸುವುದೇ ಅವರ ಗುರಿಯಾಗಿತ್ತು.

ಒಂದು ಬಟ್ಟೆಯ ಜೋಳಿಗೆಯನ್ನು ಹಿಡಿದು, ಮನೆಮನೆಗೆ ತೆರಳಿ ವ್ಯಸನಿಗಳಿಗೆ ಮನಮುಟ್ಟುವಂತೆ ತಿಳುವಳಿಕೆ ನೀಡಿದರು. ಜನರು ತಮ್ಮ ದುಶ್ಚಟಗಳಾದ ಮದ್ಯಪಾನ, ತಂಬಾಕು ಮುಂತಾದ ವಸ್ತುಗಳನ್ನು ಅವರ ಜೋಳಿಗೆಗೆ ಹಾಕಿ, ಇನ್ನು ಮುಂದೆ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡುತ್ತಿದ್ದರು. ಜಾತಿ, ಧರ್ಮ, ಭಾಷೆ ಎಂಬ ಭೇದವಿಲ್ಲದೆ ೪೨ ವರ್ಷಗಳ ಕಾಲ ದೇಶದಾದ್ಯಂತ ಹಾಗೂ ವಿದೇಶಗಳಲ್ಲೂ ತಮ್ಮ ಜೋಳಿಗೆ ಹಿಡಿದು ದುಶ್ಚಟಗಳ ಭಿಕ್ಷೆ ಬೇಡಿದರು.

ಅವರ ಈ ಕಾರ್ಯಕ್ರಮದಲ್ಲಿ, ನಾಡಿನ ಖ್ಯಾತ ವೈದ್ಯರು, ಸಾಹಿತಿಗಳು ಮತ್ತು ಧರ್ಮಗುರುಗಳನ್ನು ಸೇರಿಸಿ, ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಇದರ ಪರಿಣಾಮವಾಗಿ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ, ಅವರ ಕುಟುಂಬಗಳಲ್ಲಿ ನೆಮ್ಮದಿ ನೆಲೆಸಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರವು ಡಾ. ಮಹಾಂತ ಶಿವಯೋಗಿಗಳ ಜನ್ಮದಿನವನ್ನು ‘ವ್ಯಸನಮುಕ್ತ ದಿನ' ಎಂದು ಘೋಷಿಸಿದೆ. ಇದು ನಮ್ಮ ರಾಜ್ಯವನ್ನು ವ್ಯಸನಮುಕ್ತವನ್ನಾಗಿ ಮಾಡುವ ಒಂದು ಮಹತ್ವದ ಹೆಜ್ಜೆ. ಈ ದಿನದಂದು ನಾವು ವ್ಯಸನಗಳಿಂದ ದೂರವಿರುವ ಸದೃಢ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.

ಚಿತ್ರ : ಕೋಲಾರದಲ್ಲಿ ನಡೆದ ಡಾ. ಮಹಂತೇಶ್ ಶಿವಯೋಗಿಗಳ ಜನ್ಮ ಜಯಂತಿಯಲ್ಲಿ ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ನಮನ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande