ಬೆಂಗಳೂರು, 2 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಮಾದಕ ದ್ರವ್ಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಿರಂತರ ಜಾಗೃತಿ, ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದ್ದು, ಈಗ ಮತ್ತೊಂದು ಹಂತದ ಅಭಿಯಾನ ಆರಂಭಿಸಲಾಗಿದೆ.
ದೀನದಯಾಳ್ ಅಂತ್ಯೋದಯ ಯೋಜನೆಯಡಿ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ಎರಡು ತಿಂಗಳ ಸಮಗ್ರ ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನವನ್ನು ಆರಂಭಿಸಲಾಗಿದೆ.
ಆಗಸ್ಟ್ 1 ರಿಂದ ಸೆಪ್ಟೆಂಬರ್ 30, 2025 ರವರೆಗೆ ನಡೆಯುವ ಈ ಅಭಿಯಾನದ ಮುಖ್ಯ ಉದ್ದೇಶ ಎಂದರೆ ಹೆಚ್ಚುತ್ತಿರುವ ಮಾದಕ ದ್ರವ್ಯ ದುರುಪಯೋಗ ಮತ್ತು ಅದರ ದುಷ್ಪರಿಣಾಮಗಳನ್ನು ಪರಿಹರಿಸುವತ್ತ ಗಮನಹರಿಸುದಾಗಿದೆ.
ಕೌಶಲ್ಯಾಭಿವೃದ್ಧಿ ಇಲಾಖೆ ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಶ್ರೀವಿದ್ಯಾ ಈ ಕುರಿತು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವ್ಯಾಪಕವಾದ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆ ಮತ್ತು ಶಿಕ್ಷಣವನ್ನು ನೀಡಲು ರಾಜ್ಯದ ಪ್ರತಿ ಗ್ರಾಮ ಪಂಚಾಯತ್‌ನಿಂದ ಎಲ್ಲಾ ಆಡಳಿತ ಹಂತಗಳಲ್ಲಿ ಸರಣಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನವನ್ನು ರಾಜ್ಯಾದ್ಯಂತ ಮಹಿಳಾ ಸ್ವ-ಸಹಾಯ ಗುಂಪುಗಳು ಮತ್ತು ಇತರೆ ಸಮುದಾಯದೊಂದಿಗೆ ನಡೆಸಲಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಮಾದಕ ದ್ರವ್ಯ ಬಳಕೆ ಮತ್ತು ವ್ಯಸನದಿಂದ ಉಂಟಾಗುವ ಹಿಂಸೆ, ದೌರ್ಜನ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಮಗ್ರ ಜಾಗೃತಿ ಮೂಡಿಸಲಾಗುತ್ತದೆ. ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಮತ್ತು ಅವುಗಳ ದುಷ್ಪರಿಣಾಮಗಳ ಬಗ್ಗೆ ಸಮುದಾಯಗಳಿಗೆ ತಿಳಿಸಲು, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ಸಮಾಜದ ಪ್ರತಿಯೊಬ್ಬ ಸದಸ್ಯರು ಮಾದಕ ವಸ್ತುಗಳ ದುರುಪಯೋಗ ಮತ್ತು ವ್ಯಸನಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಋಣಾತ್ಮಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು. ಇಂಥ ದುಶ್ಚಟಗಳಿಗೆ ಬಲಿಯಾಗದೆ ಮುಕ್ತ ಜೀವನ ನಡೆಸಬೇಕು. ಪ್ರತಿ ಹಳ್ಳಿಯಲ್ಲಿ ಸ್ವಸಹಾಯ ಗುಂಪುಗಳ ನೇತೃತ್ವದ ಜಾಗೃತಿ ಮೂಲಕ ಆರೋಗ್ಯಕರ, ಸುರಕ್ಷಿತ ಮತ್ತು ಮಾದಕ ದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮ ಉದ್ದೇಶ ಎಂದು ಅಭಿಯಾನ ನಿರ್ದೇಶಕಿ ಶ್ರೀವಿದ್ಯಾ ತಿಳಿಸಿದ್ದಾರೆ.
ಅಭಿಯಾನವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುವುದು.
ಬೀದಿ ನಾಟಕಗಳು, ಜಾಗೃತಿ ರ‍್ಯಾಲಿಗಳು, ಉಪನ್ಯಾಸಗಳು, ಕಾರ್ಯಾಗಾರಗಳು, ಕರಪತ್ರಗಳು ಮತ್ತು ಪೋಸ್ಟರ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಅಭಿಯಾನಗಳು, ಆರೋಗ್ಯ ಸಲಹಾ ಶಿಬಿರಗಳು, ಕಿರುಚಿತ್ರಗಳ ಪ್ರದರ್ಶನಗಳು ಪ್ರಮಾಣ ವಚನ ಸಮಾರಂಭಗಳು ಈ ಎರಡು ತಿಂಗಳ ಅಭಿಯಾನದಲ್ಲಿ ಸೇರಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa