ಬೆಂಗಳೂರು, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನ ಸೌಧ ಸಭಾಂಗಣದಲ್ಲಿ ಇಂದು ನಡೆದ ರಾಜ್ಯ ಅನುಸೂಚಿತ ಜಾತಿ/ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಕಲ್ಯಾಣ ಯೋಜನೆಗಳ ಅನುಷ್ಠಾನ, ಅನುದಾನ ಹಂಚಿಕೆ ಹಾಗೂ ದೇವದಾಸಿ ಪುನರ್ವಸತಿ ಕುರಿತಂತೆ ಮಹತ್ವದ ನಿರ್ಧಾರಗಳು ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕಳೆದ ವರ್ಷ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಲ್ಯಾಣ ಯೋಜನೆಗಳಿಗೆ ರೂ.38,793 ಕೋಟಿ ಬಿಡುಗಡೆಯಾಗಿದ್ದು, ಶೇ.97ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು. ಕೇಂದ್ರದಿಂದ ಬರಬೇಕಾದ ರೂ.880 ಕೋಟಿ ಇನ್ನೂ ಬಾಕಿಯಿದ್ದು, ಅದನ್ನು ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಾಯ್ದೆ ಜಾರಿಗೆ 10 ವರ್ಷವಾದರೂ ನಿರೀಕ್ಷಿತ ಮಟ್ಟದ ಬದಲಾವಣೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಈವರೆಗೆ ರೂ.2.97 ಲಕ್ಷ ಕೋಟಿ ವೆಚ್ಚ ಮಾಡಿದ್ದರೂ ಸಮಾಜದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪರಿಸ್ಥಿತಿ ಸುಧಾರಿಸದಿರುವುದು ನಾಚಿಕೆಗೇಡು ಎಂದರು. ಈ ವರ್ಷ ರೂ.42,017 ಕೋಟಿ ಅನುದಾನವನ್ನು ಶೇ.100ರಷ್ಟು ಬಳಸಲೇಬೇಕೆಂದು ಇಲಾಖೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದರು.
ದೇವದಾಸಿ ಪದ್ಧತಿ ನಿರ್ಮೂಲನೆಗೆ ಸೆಪ್ಟೆಂಬರ್‌ನಲ್ಲಿ ಪುನರ್ ಸಮೀಕ್ಷೆ ನಡೆಸಲಾಗುವುದಾಗಿ ದೇವದಾಸಿ ಪದ್ಧತಿ ನಿರ್ಮೂಲನೆ ತಡೆಯಲು ವಿಫಲರಾದ ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿ ತರಲಾಗುವುದೆಂದು ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa