ಬೆಂಗಳೂರು, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರನಟ ದರ್ಶನ್‌ಗೆ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ್ದ ಜಾಮೀನನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದೆ.
ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಆರೋಪಿಗಳು ಇಂದೇ ಶರಣಾಗಬೇಕು ಇಲ್ಲವಾದಲ್ಲಿ ಬಂಧಿಸುವಂತೆ ನ್ಯಾಯಾಲಯ ಪೋಲಿಸರಿಗೆ ಸೂಚಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯ, ಯಾರೇ ಎಷ್ಟೇ ದೊಡ್ಡವರಾದರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಹೇಳಿದೆ.
ಕೊಲೆ ಪ್ರಕರಣದಲ್ಲಿ ಬಂಧನದಲ್ಲಿ ವೇಳೆ ಬೆಂಗಳೂರಿನ ಪರಪ್ಪನ್ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಿರುವುದಕ್ಕೆ ಜೈಲು ಸೂಪರಿಂಟೆಂಡೆಂಟ್‌ನ್ನು ಅಮಾನತು ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ. ಇದು ಮಹತ್ವದ ತೀರ್ಪು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣ ಇತರ ಆರೋಪಿಗಳಾದ ಪವಿತ್ರಾ ಗೌಡ, ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್ ಅಲಿಯಾಸ್ ಅನು, ಪ್ರದೂಷ್, ನಾಗರಾಜು ಅಲಿಯಾಸ್ ನಾಗ, ಲಕ್ಷ್ಮಣ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದಾಗಿದೆ.
ಪ್ರಕರಣದ ಹಿನ್ನಲೆ:
ಮೃತ ರೇಣುಕಾಸ್ವಾಮಿ ಆರೋಪಿ ದರ್ಶನ್ ಅಭಿಮಾನಿಯಾಗಿದ್ದ. ಆರೋಪಿ ದರ್ಶನ್ ಜೊತೆ ಪವಿತ್ರಗೌಡ ಲಿವ್-ಇನ್ ಸಂಬಂಧದಲ್ಲಿದ್ದರು. ರೇಣುಕಾ ಪವಿತ್ರಾಗೆ ಇನ್ಸ್ಟಾದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ.
ಈ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನ ಅಪಹರಿಸಿ, ಶೆಡ್ನಲ್ಲಿ ಕೊಲೆ ಮಾಡಿದ್ದರು. ಆರೋಪಿಗಳು ಕೊಲೆ ಆದ ಸ್ಥಳದಲ್ಲಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಅಪಹರಣದ ವೇಳೆ, ಕೊಲೆ ಸ್ಥಳದಲ್ಲಿ ಆರೋಪಿಗಳಿದ್ದಿದ್ದು ತಿಳಿದುಬಂದಿದೆ.
2024 ಜೂನ್ 8ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ, ಹಲ್ಲೆ, ಕೊಲೆ ನಡೆದಿದ್ದು, ಜೂನ್ 11ರಂದು ದರ್ಶನ್ ಬಂಧನಕ್ಕೊಳಗಾದರು.
ಹಲವು ತಿಂಗಳು ಜೈಲಿನಲ್ಲಿ ಇದ್ದ ಅವರು ಅಕ್ಟೋಬರ್ 30ರಂದು ಬೆನ್ನುನೋವಿನ ಕಾರಣ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಡಿಸೆಂಬರ್ 13ರಂದು ಉಚ್ಚ ನ್ಯಾಯಾಲಯ ನಿಯಮಿತ ಜಾಮೀನು ನೀಡಿತ್ತು.
ಕರ್ನಾಟಕ ಸರ್ಕಾರ ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ವಿಚಾರಣೆ ಬಳಿಕ ಜುಲೈ 24ರಂದು ತೀರ್ಪು ಕಾಯ್ದಿರಿಸಿದ ನ್ಯಾಯಾಲಯ ಇಂದು ಜಾಮೀನು ರದ್ದುಪಡಿಸಿದೆ. ಇದರೊಂದಿಗೆ ದರ್ಶನ್ ಮತ್ತು ಇತರರು ಜೈಲು ಸೇರುವ ಪರಿಸ್ಥಿತಿ ಉಂಟಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa