ಮುಂಬಯಿ, 18 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರದ ಮುಂಬೈ, ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ನಿರಂತರ ಭಾರಿ ಮಳೆಯಿಂದ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದು, ದಾದರ್–ಕುರ್ಲಾ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಸ್ಥಳೀಯ ರೈಲು ಸೇವೆ ಅಸ್ತವ್ಯಸ್ತಗೊಂಡಿದೆ. ಅಂಧೇರಿ ಮೆಟ್ರೋ ಮಾರ್ಗದ ಎರಡೂ ಪಥಗಳು ಸಂಚಾರಕ್ಕೆ ಮುಚ್ಚಲ್ಪಟ್ಟಿವೆ.
ಮಹಾನಗರ ಪಾಲಿಕೆ ಆಯುಕ್ತ ಭೂಷಣ್ ಗಗರಾಣಿ ಅವರು ಶಾಲಾ–ಕಾಲೇಜುಗಳಿಗೆ ಮಧ್ಯಾಹ್ನದಿಂದ ರಜೆ ಘೋಷಿಸಿದ್ದು, ನಾಗರಿಕರು ಅಗತ್ಯವಿದ್ದಾಗ ಮಾತ್ರ ಹೊರಬರಲು ಮನವಿ ಮಾಡಿದ್ದಾರೆ.
ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಂಚಾರ ಪೊಲೀಸರು ವಾಹನಗಳನ್ನು ಠಾಕ್ರೆ ಸೇತುವೆ ಮತ್ತು ಗೋಖಲೆ ಸೇತುವೆ ಮಾರ್ಗಗಳಿಗೆ ತಿರುಗಿಸಿದ್ದಾರೆ.
ವಿಮಾನ ಪ್ರಯಾಣಕ್ಕೂ ಪರಿಣಾಮ ಬೀರಿದ್ದು, ಇಂಡಿಗೋ, ಏರ್ ಇಂಡಿಯಾ ಹಾಗೂ ಆಕಾಶ ಏರ್ ತಮ್ಮ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿ ತೆರಳಲು, ಹೆಚ್ಚುವರಿ ಸಮಯ ಕಾದಿರಲು ಹಾಗೂ ಪ್ರಯಾಣಕ್ಕೂ ಮೊದಲು ವಿಮಾನ ಸ್ಥಿತಿಯನ್ನು ಪರಿಶೀಲಿಸಲು ಸೂಚನೆ ನೀಡಿವೆ.
ಮುಂದಿನ 48 ಗಂಟೆಗಳವರೆಗೆ ಮುಂಬೈ ಹಾಗೂ ಸುತ್ತಮುತ್ತಲಿನಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa