ಬೆಂಗಳೂರು ವಿಭಜನೆಗೆ ಜೆಡಿಎಸ್ ಅವಕಾಶ ನೀಡುವುದಿಲ್ಲ : ರಮೇಶಗೌಡ
ಬೆಂಗಳೂರು ಜನತೆಯನ್ನು ಸರಕಾರ ಕೊಳ್ಳೆ ಹೊಡೆಯುತ್ತಿದೆ; ಜೆಡಿಎಸ್‌ ಆರೋಪ
ಬೆಂಗಳೂರು ವಿಭಜನೆಗೆ ಜೆಡಿಎಸ್ ಅವಕಾಶ ನೀಡುವುದಿಲ್ಲ : ರಮೇಶಗೌಡ


ಬೆಂಗಳೂರು, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ತೆರಿಗೆ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್‌ ಸರಕಾರ ಬೆಂಗಳೂರು ನಗರದ ಜನರನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಜೆಡಿಎಸ್‌ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್‌ ಗೌಡ ಆರೋಪಿಸಿದ್ದು ಈ ಲೂಟಿ ವಿರುದ್ಧ ಪಕ್ಷ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಪಕ್ಷದ ಹಿರಿಯ ನಾಯಕ ಕೆ.ಎ. ತಿಪ್ಪೇಸ್ವಾಮಿ ಇನ್ನಿತರೆ ನಾಯಕರೊಂದಿಗೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಗ್ರೆಟರ್ ಬೆಂಗಳೂರು ಹೆಸರಿನಲ್ಲಿ ನಗರದಲ್ಲಿ ತೆರಿಗೆ ರಾಜ್‌ ಸೃಷ್ಟಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಗ್ರೆಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ʼಎʼ ಹಾಗೂ ʼಬಿʼ ಖಾತೆ ನೀಡುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಎರಡು ವರ್ಷ ಪೂರೈಸಿದರು ಕಾಂಗ್ರೆಸ್ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಬದಲಾಗಿ ಸಾರ್ವಜನಿಕರ ಸುಲಿಗೆಯಲ್ಲಿ ನಿರತವಾಗಿದೆ ಎಂದು ದೂರಿದರು.

25-07-2025ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ ʼಬಿʼ ಖಾತೆ ಸ್ವತ್ತುಗಳಿಗೆ ʼಎʼ ಖಾತೆ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಸಂಕಷ್ಟ ಉಂಟಾಗಿದೆ. ಆದರೆ ಈ ಸರಕಾರಕ್ಕೆ ಹಣ ಮಾಡುವುದೇ ಉದ್ದೇಶವಾಗಿದೆಯೇ ವಿನಾ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಜನ ವಿರೋಧಿ ತೆರಿಗೆ ಖಂಡಿಸಿ ಜೆಡಿಎಸ್‌ ಸರಕಾರದ ವಿರುದ್ಧ ಜನಾಂದೋಲ‌ನ ನಡೆಸುತ್ತದೆ. ನಮ್ಮ ಪಕ್ಷದ ವತಿಯಿಂದ‌ ಕಾನೂನು ಹೋರಾಟವನ್ನೂ ಮಾಡುತ್ತೇವೆ. ಬೆಂಗಳೂರು ನಗರ ಮೊದಲಿನಂತೆ ಉಳಿಯಬೇಕು. ಬೆಂಗಳೂರು ನಗರವನ್ನು ಐದು ಭಾಗವನ್ನಾಗಿ ಮಾಡಿರುವುದು ಸುಲಿಗೆ ಮಾಡಲು. ಗ್ರೇಟರ್‌ ಬೆಂಗಳೂರು ಹೆಸರಿನಲ್ಲಿ ಬಿಬಿಎಂಪಿಯನ್ನು ಛಿದ್ರ ಮಾಡಿದ್ದು ಬೆಂಗಳೂರಿನ ಜನತೆಗೆ ಎಸಗಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ವಿಭಜನೆಗೆ ಜೆಡಿಎಸ್ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande