ಬಳ್ಳಾರಿ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ರೈತರು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು ಎಂದು ಉಪ ಕೃಷಿನಿರ್ದೇಶಕ ಎಸ್.ಎನ್.ಮಂಜುನಾಥ ಅವರು ತಿಳಿಸಿದ್ದಾರೆ.
ಕೃಷಿ ಇಲಾಖೆ ವತಿಯಿಂದ ಆತ್ಮ ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ರೈತರ ತರಬೇತಿ ಕಾರ್ಯಕ್ರಮ, ರೈತ ಕ್ಷೇತ್ರ ಪಾಠಶಾಲೆ, ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರು ಒಂದೇ ಬೆಳೆಯನ್ನು ಅವಲಂಬಿಸದೇ ಬೆಳೆ ಪರಿವರ್ತನೆಯನ್ನು ಕೈಗೊಳ್ಳಬೇಕು. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆಯನ್ನು ರೈತರು ಉಪಯೋಗಿಸುವುದರಿಂದ ಬೇಸಾಯದ ಖರ್ಚನ್ನು ತಗ್ಗಿಸಬಹುದು ಎಂದು ರೈತರಿಕೆ ಮನವರಿಕೆ ಮಾಡಿಕೊಟ್ಟರು.
ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಅವರು ಮಾತನಾಡಿ, ರೈತರು ತಾವು ಬೆಳೆದ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂಭವಿಸಿ ಬೆಳೆ ಹಾನಿಯಾದರೆ ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟಗಳನ್ನು ನಿರ್ವಹಣೆ ಮಾಡಲು ಬೇವು ಆಧಾರಿತ ಕೀಟನಾಶಕಗಳನ್ನು ಸಿಂಪಡಣೆ ಮಾಡಬೇಕು. ಗುಲಾಬಿ ಕಾಯಿ ಕೊರಕದ ನಿರ್ವಹಣೆಗೆ ಪ್ರತಿ ಎಕರೆಗೆ 2 ರಂತೆ ಲಿಂಗಾಕರ್ಷಕ ಬಲೆಗಳನ್ನು ನೆಡಬೇಕು ಎಂದು ಹೇಳಿದರು.
ಹಗರಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿಗಳಾದ ಮಲ್ಲೇಶ್ ಅವರು ಮಾತನಾಡಿ, ರೈತರು ಎಕರೆಗೆ 2 ರಿಂದ 3 ಪ್ಯಾಕೆಟ್ ಹತ್ತಿ ಬೀಜವನ್ನು ಉಪಯೋಗಿಸದೆ, ಒಂದು ಪ್ಯಾಕೆಟ್ ಬೀಜವನ್ನು ಉಪಯೋಗಿಸಬೇಕು. ಗಿಡದಿಂದ ಗಿಡಕ್ಕೆ ಅಂತರ ಕಾಪಾಡುವುದರಿಂದ ಇಳುವರಿಯನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.
ಬಿಟಿ ಹತ್ತಿ ಬೆಳೆಯಲು ಅನುಮತಿ ನೀಡಿದಾಗಿನಿಂದಲೂ ಇಲ್ಲಿಯವರೆಗೆ ಬಿಟಿರಹಿತ ಹತ್ತಿ (ರೆಫ್ಯೂಜಿ)ಯನ್ನು ಬೆಳೆಯದಿರುವುದು ಗುಲಾಬಿ ಕಾಯಿ ಕೊರಕದ ಉಲ್ಬಣಕ್ಕೆ ಕಾರಣವಾಗಿದೆ ಎಂದರಲ್ಲದೇ ಕೀಟನಾಶಕಗಳನ್ನು ಶಿಫಾರಸ್ಸು ಮಾಡಿರುವುದಕ್ಕಿಂತ ಹೆಚ್ಚಿನ ಬಳಕೆ ಮಾಡಿರುವುದರಿಂದ ಈ ಕೀಟವು ಹಲವು ಕೀಟನಾಶಕಗಳಿಗೆ ನಿರೋಧಕಶಕ್ತಿಯನ್ನು ಬೆಳೆಸಿಕೊಂಡಿದೆ ಎಂದರು.
ಗುಲಾಬಿ ಕಾಯಿ ಕೊರಕ ಕಂಡುಬಂದಲ್ಲಿ 3 ಮಿ.ಲೀ. ಬೇವಿನ ಮೂಲದ ಕೀಟನಾಶಕ ಅಥವಾ 1 ಗ್ರಾಂ ಥಯೋಡಿಕಾರ್ಬ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಕೀಟನಾಶಕವನ್ನು ಸಿಂಪಡಿಸಬೇಕು ಎಂದು ಮಾಹಿತಿ ನೀಡಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ್ ಸಿಂಧಿಗೇರಿ, ಕೃಷಿ ಇಲಾಖೆಯಡಿ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು.
ಇಫ್ಕೊದವರಿಂದ ರೈತ ಕ್ಷೇತ್ರ ಪಾಠಶಾಲೆಯಡಿ ಹತ್ತಿ ಬೆಳೆಗೆ ನ್ಯಾನೋ ಯೂರಿಯಾ ಹಾಗೂ ಸಾಗರಿಕಾ ಎಂಬ ದ್ರಾವಣವನ್ನು ಡ್ರೋನ್ ಮೂಲಕ ಸಿಂಪಡಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್