ಒಳ ಮೀಸಲಾತಿಗೆ ಒತ್ತಾಯಿಸಿ ಮಾದಿಗ ದಂಡೋರದಿಂದ ಕೇಶ ಮುಂಡನೆ ಪ್ರತಿಭಟನೆ
ಒಳ ಮೀಸಲಾತಿಗೆ ಒತ್ತಾಯಿಸಿ ಮಾದಿಗ ದಂಡೋರದಿಂದ ಕೇಶ ಮುಂಡನೆ ಮಾಡಿ ಪ್ರತಿಭಟನೆ
ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಳ ಮೀಸಲಾತಿಗೆ ಒತ್ತಾಯಿಸಿ ಮಾದಿಗ ದಂಡೋರದಿಂದ ಕೇಶ ಮುಂಡನೆ ಮಾಡಿ ಪ್ರತಿಭಟಿಸಲಾಯಿತು.


ಕೋಲಾರ, ೦೧ ಆಗಸ್ಟ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲಾ ಮಾದಿಗ ಸಮುದಾಯದವರು ಅರೆ ಬೆತ್ತಲೆ ಹಾಗೂ ಕೇಶ ಮುಂಡನೆ ಮಾಡಿಸಿಕೊಳ್ಳವ ಮೂಲಕ ಆಕ್ರೋಶ ವ್ಯಕ್ತಪಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು ಹಾಗೂ ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆಗಳನ್ನು ಹಾಕಿದರು.

ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಮಾದಿಗ ಸಮುದಾಯದ ಮುಖಂಡರುಗಳು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಗೆ ಆಗಬೇಕಾಗಿದ್ದ ಒಳ ಮೀಸಲಾತಿಯ ಬೇಡಿಕೆಗಾಗಿ ಕಳೆದ ೩೫ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ನೆನೆಗುದಿಗೆ ಬಿದ್ದಿದ್ದು, ಸರ್ವೋಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿಯಲ್ಲಿರುವ ೧೦೧ ಸಮುದಾಯಗಳಿಗೆ ಒಳಮೀಸಲಾತಿ ನೀಡುವಂತೆ ತೀರ್ಪು ನೀಡಿದ್ದರೂ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ಇದೇ ತಿಂಗಳು ನಡೆಯಲಿರುವ ಅಧಿವೇಶನದಲ್ಲಿ ಒಳ ಮೀಸಲಾತಿ ಪ್ರಕಟಣೆ ಮಾಡದಿದ್ದರೆ ೧೮ ನೇ ತಾರೀಖು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವದ ಮುಖಂಡತ್ವವನ್ನು ಮಾದಿಗ ದಂಡೋರದ ರಾಜ್ಯ ಉಪಾಧ್ಯಕ್ಷ ಸಾಹುಕಾರ್ ಶಂಕರಪ್ಪ,ಹಾರೋಳ್ಳಿ ವೆಂಕಟೇಶ್,ಆಲೇರಿ ಮುನಿರಾಜು, ವೆಂಕಟಸ್ವಾಮಿ,ದಿನ್ನೆ ಹೊಸಹಳ್ಳಿ ಆಂಜಿ, ಹಾರೋಹಳ್ಳಿ ಸೀನ,ಜೆ.ಎಂ.ದೇವರಾಜ್, ವೇಣು ಮುಂತಾದವರು ವಹಿಸಿದ್ದು, ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮುಖಂಡರು ಭಾಗವಹಿಸಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಳ ಮೀಸಲಾತಿಗೆ ಒತ್ತಾಯಿಸಿ ಮಾದಿಗ ದಂಡೋರದಿಂದ ಕೇಶ ಮುಂಡನೆ ಮಾಡಿ ಪ್ರತಿಭಟಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande