ಗದಗ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಬಹುತೇಕ ಕಡೆ ಮುಂಗಾರು ಮಳೆ ಚೆನ್ನಾಗಿ ಆಗಿದ್ದು, 1 ಜೂನ್ 2025 ರಿಂದ 31 ಜುಲೈ 2025ರವರೆಗೆ 156ಮಿ.ಮೀ. ವಾಡಿಕೆ ಮಳೆಗೆ 161ಮಿ.ಮೀ, ಶೇ.3 ರಷ್ಟು ಅಧಿಕ ಮಳೆಯಾಗಿದೆ. ಭಾರತ ಹವಾಮಾನ ವಿಭಾಗವು ನೀಡಿದ ಮುನ್ಸೂಚನೆಯಂತೆ ಮುಂದಿನ 5 ದಿನಗಳು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹಗುರ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ 132500ಹೆ. ಹೆಸರು ಬಿತ್ತನೆ ಗುರಿಗೆ 123956(ಶೇ.94), ಮೆಕ್ಕೆಜೋಳ 115700 ಹೆ. ಗುರಿಗೆ 141741 ಹೆ.(ಶೇ.123), ಶೇಂಗಾ 21000 ಹೆ. ಗುರಿಗೆ 17810 ಹೆ.(ಶೇ.85), ಸೇರಿದಂತೆ ಒಟ್ಟು 306185 ಹೆ. ಬಿತ್ತನೆ ಗುರಿಗೆ 304136 ಹೆ.(ಶೇ.99.33) ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯಾದ್ಯಂತ ಹೆಸರು ಬೆಳೆಯು 40ರಿಂದ 75 ದಿನಗಳ ಬೆಳೆಯಿದ್ದು ಹೂ ಬಿಡುವ ಹಂತದಿAದ ಕಾಳುಕಟ್ಟುವ ಹಂತದಲ್ಲಿದೆ. ಮೆಕ್ಕೆಜೋಳ ಬೆಳೆಯು 40ರಿಂದ 50 ದಿನಗಳ ಬೆಳೆಯಿದೆ. ಶೇಂಗಾ ಬೆಳೆಯು ಬೆಳವಣಿಗೆ ಹಂತದಿಂದ ಕಾಯಿ ಕಟ್ಟುವ ಹಂತದಲ್ಲಿದೆ. ತೊಗರಿ, ಹತ್ತಿ, ಸೂರ್ಯಕಾಂತಿ ಹಾಗೂ ಸಜ್ಜೆ ಬೆಳೆಗಳು 30 ರಿಂದ 45 ದಿನಗಳ ಬೆಳೆ ಇದ್ದು, ಬೆಳವಣಿಗೆ ಹಂತದಲ್ಲಿವೆ. ಬೆಳೆಯ ಈ ಹಂತದಲ್ಲಿ ಟಾನಿಕ್ ಸಿಂಪಡಿಸಬಾರದು. ಇದರಿಂದ ಹೂವು ಹಾಗೂ ಕಾಯಿಗಳು ಉದುರಿ ಹಾನಿಯಾಗುವ ಸ0ಭವವಿರುತ್ತದೆ.
ಜಿಲ್ಲೆಯಲ್ಲಿ ಒಳ್ಳೆಯ ಮಳೆಯ ನಂತರ ಮೋಡ ಕವಿದ ವಾತಾವರಣದ ಜೊತೆಗೆ ಬಿಸಿಲು ಬೀಳುತ್ತಿರುವುದು ಬೂದು ರೋಗ, ಎಲೆಚುಕ್ಕೆ ರೋಗ, ತುಕ್ಕು ರೋಗ, ಸುರುಳಿ ಪೂಚಿ, ರಸಹೀರುವ ಕೀಟಗಳು, ಕಾಂಡ ಕೊರೆಯುವ ಕೀಟಗಳ ಬಾಧೆ ಹೆಚ್ಚಾಗಲು ಅನುಕೂಲಕರ ವಾತಾವರಣವಿರುತ್ತದೆ
ಬೂದು ರೋಗ ಹಾಗೂ ಸರ್ಕೊಸ್ಪೊರಾ ಎಲೆಚುಕ್ಕೆ ರೋಗಗಳಿಗೆ 1.5ಗ್ರಾಂ./ಲೀ ನೀರಿಗೆ ಸ್ವಾಧೀನ್ ಪೀಡೆನಾಶಕವನ್ನು ಬೆರೆಸಿ ಸಿಂಡಿಸಬಹುದು. ಹೆಸರು ಬೆಳೆಯಲ್ಲಿ ರಸ ಹೀರುವ ಕೀಟವನ್ನು ನಿಯಂತ್ರಿಸಲು 1ಮಿ.ಲೀ. ಮಿಥೈಲ್ ಪ್ಯಾರಥಿಯಾನ್ 50% ಇ.ಸಿ., ಅಥವಾ 1.75 ಮಿ.ಲೀ. ಡೈಮಿಥೋಯೇಟ್ 30% ಇ.ಸಿ.ಯನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಿ. ನಂಜಾಣು ರೋಗ ಬಾಧಿತ ಗಿಡಗಳನ್ನು ಕಿತ್ತು ನಾಶ ಪಡಿಸಬೇಕು. ನಂತರ ಪ್ರತಿ ಲೀಟರ್ ನೀರಿಗೆ 0.5 ಮಿ.ಲೀ ಇಮಿಡಾಕ್ಲೊಪ್ರಿಡ್ ಮತ್ತು ಲಘು ಪೋಷಕಾಂಶ ಪೂರೈಸುವ ಗೊಬ್ಬರವನ್ನು ಬೆರೆಸಿ ಸಿಂಪಡಿಸಬೇಕು.
ಶೇಂಗಾ ಎಲೆಚುಕ್ಕೆ ರೋಗವನ್ನು 1 ಮಿ.ಲೀ./ಲೀಟರ್ ನೀರಿಗೆ ಸ್ಕೋರ್ ಪೀಡೆನಾಶಕದ ಸಿಂಪರಣೆ ಮಾಡುವುದರಿಂದ ನಿರ್ವಹಿಸಬಹುದು. ಅಪಿಡೊಪೈರೊಪೆನ್ 50 ಜಿ/ಎಲ್ ಡಿಸಿ(ಸೆಫಿನಾ)ವನ್ನು 2 ಮಿ.ಲೀ/ಲೀ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಬಿಳಿ ನೊಣ, ಹೇನು ಇತ್ಯಾದಿ ರಸಹೀರುವ ಕೀಟಗಳನ್ನು ನಿಯಂತ್ರಿಸಬಹುದಾಗಿದೆ. ಶೇಂಗಾ ಬೆಳೆಯಲ್ಲಿ ಬಡ್ ನೆಕ್ರೋಸಿಸ್ ವೈರಸ್ ಅನ್ನು ನಿಯಂತ್ರಿಸಲು ರೆಜೆಂಟ್ 0.5 ಮಿಲೀ/ಲೀ. ನೀರಿಗೆ ಬೆರೆಸಿ ಸಿಂಪಡಿಸಬಹುದಾಗಿದೆ.
ತೊಗರಿಯಲ್ಲಿ ಅಂತರ ಬೇಸಾಯ ಮಾಡಿ, ಕೈಗಳೆ ತೆಗೆದು, ಡಿ.ಎ.ಪಿ ಮೇಲುಗೊಬ್ಬರವನ್ನು ಕೊಡಬೇಕು. ಬೂದು ದುಂಬಿಯ ನಿಯಂತ್ರಣಕ್ಕಾಗಿ ಪ್ರತಿ ಲೀಟರ ನೀರಿನಲ್ಲಿ 2 ಮಿ.ಲೀ.ಕ್ವಿನಾಲ್ಫಾಸ್ ಬೆರೆಸಿ ಸಿಂಪಡಿಸಬೇಕು. ಕಾಂಡ ಕೊರಕ ನಿಯಂತ್ರಣಕ್ಕಾಗಿ ಶೇ.3 ರ ಕಾರ್ಬೊಫ್ಯೂರಾನ್ ಹರಳುಗಳನ್ನು ಎಲೆಯ ಸುಳಿಯಲ್ಲಿ ಹಾಕಬೇಕು. ಫಾಲ್ ಸೈನಿಕ ಹುಳುವಿನ ನಿಯಂತ್ರಣಕ್ಕಾಗಿ 0.5 ಮಿ.ಲೀ. ಅಥವಾ 0.3ಮಿ.ಲೀ ಕ್ಲೋರಾಂಟ್ರಿನಿಲಿಪ್ರೋಲ್ 1 ಲೀ.ನೀರಿಗೆ ಬೆರೆಸಿ ಕೈ ಪಂಪಿನಿಂದ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು.
ಗೊಣ್ಣೆಹುಳು/ವೈರ್ ಹುಳು/ಗೆದ್ದಲಿಗೆ 2ಮಿ.ಲೀ./ಲೀ ನೀರಿಗೆ ಲೆಸೆಂಟಾ ಕೀಟನಾಶಕವನ್ನು ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ಗೌಚೊದಿಂದ ಬೀಜೋಪಚಾರ ಮಾಡಿದಲ್ಲಿ ಬೆಳೆಯ ಬೆಳವಣಿಗೆ ಕಾಲಕ್ಕೆ ಬಹಳಷ್ಟು ಕೀಟಗಳಿಂದ ಪರಿಣಾಮಕಾರಿ ನಿಯಂತ್ರಣವನ್ನು ಸಾಧಿಸಬಹುದು.
ರೈತರು ಬೆಳೆ ಪರಿವರ್ತನೆ, ಅಂತರ ಬೆಳೆ ಪದ್ಧತಿ ಹಾಗೂ ಮಿಶ್ರ ಬೆಳೆ ಪದ್ಧತಿಗಳನ್ನು ಅನುಸರಿಸಲು ಮನವಿ ಮಾಡಲಾಗಿದೆ. ಇದರಿಂದ ಕೀಟ ರೋಗದ ಬಾಧೆ ಕಡಿಮೆಯಾಗಿ ಹೆಚ್ಚಿನ ಇಳುವರಿ ಪಡೆಯಬಹುದು ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP